ಹುಣಸೂರು ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಉಪವಿಭಾಗ ಮಟ್ಟದ ಅನುಸೂಚಿತ ಜಾತಿ ಮತ್ತು ಅನುಸೂಚಿತ ವರ್ಗಗಳ ದೌರ್ಜನ್ಯ ಪ್ರತಿಬಂಧಕ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸದಸ್ಯರು ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು. ಉಪವಿಭಾಗಾಧಿಕಾರಿ ಮಂಜುನಾಥ್, ತಹಸೀಲ್ದಾರ್ ಜೆ.ಮಂಜುನಾಥ್, ಇಒ ಕೆ.ಹೊಂಗಯ್ಯ ಇತರರಿದ್ದರು.
ಅಧಿಕಾರಿಗಳಿಗೆ ಗಿರಿಜನ ಕಲ್ಯಾಣಾಧಿಕಾರಿ ಗಂಗಾಧರ್ ಸೂಚನೆ ಉಸ್ತುವಾರಿ ಸಮಿತಿ ಸಭೆ
ಹುಣಸೂರು: ತಾಲೂಕಿನ ಗೋವಿಂದನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ವಿನಾಯಕನಗರ ಕಾಲನಿಯಲ್ಲಿ ಕೇವಲ 4 ಪರಿಶಿಷ್ಟ ಕುಟುಂಬಗಳಿಗೆ ಮಾತ್ರ ಪೌಷ್ಟಿಕ ಆಹಾರ ವಿತರಣೆ ವ್ಯವಸ್ಥೆ ಮಾಡಬೇಕಿದ್ದು, ಇದಕ್ಕಾಗಿ ಕುಟುಂಬದಿಂದ ಅಗತ್ಯ ದಾಖಲಾತಿಗಳನ್ನು ಕೋರಲಾಗಿದೆ ಎಂದು ಗಿರಿಜನ ಕಲ್ಯಾಣಾಧಿಕಾರಿ ಗಂಗಾಧರ್ ತಿಳಿಸಿದರು.
ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಉಪ ವಿಭಾಗಾಧಿಕಾರಿ ಮಂಜುನಾಥ್ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದ ಉಪವಿಭಾಗ ಮಟ್ಟದ ಅನುಸೂಚಿತ ಜಾತಿ ಮತ್ತು ಅನುಸೂಚಿತ ವರ್ಗಗಳ ದೌರ್ಜನ್ಯ ಪ್ರತಿಬಂಧಕ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸಮಿತಿಯ ಈ ಹಿಂದಿನ ಸದಸ್ಯರು ಒತ್ತಾಯಿಸಿದಂತೆ ಕಾಲನಿಗೆ ಎರಡು ಬಾರಿ ಭೇಟಿ ನೀಡಿದ್ದು, ಸದಸ್ಯರು ತಿಳಿಸಿದಂತೆ ಅಲ್ಲಿ 13 ಕುಟುಂಬಗಳು ಇಲ್ಲ. ಬದಲಾಗಿ 9 ಕುಟುಂಬಗಳಿದ್ದು, ಈ ಪೈಕಿ 5 ಕುಟುಂಬಗಳು ಈಗ ಅಲ್ಲಿ ವಾಸಿಸುತ್ತಿಲ್ಲ. ಮಿಕ್ಕ ನಾಲ್ಕು ಕುಟುಂಬಗಳ ಬಳಿ ಅಗತ್ಯ ದಾಖಲೆಗಳನ್ನು ಒದಗಿಸಲು ಸೂಚಿಸಿದ್ದು, ದಾಖಲೆ ದೊರೆತಲ್ಲಿ ಪಡಿತರ ವ್ಯವಸ್ಥೆ ಕೈಗೊಳ್ಳುವುದಾಗಿ ತಿಳಿಸಿದರು.
ಸಮಿತಿ ಸದಸ್ಯ ಕಟ್ಟೆಮಳಲವಾಡಿ ಅಶೋಕ್‌ಕುಮಾರ್ ಮಾತನಾಡಿ, ನಿಜವಾದ ಫಲಾನುಭವಿಯನ್ನು ಗುರುತಿಸಿ ಸವಲತ್ತು ನೀಡುವುದು ನಿಮ್ಮ ಕರ್ತವ್ಯ. ಯಾರದ್ದೋ ಪ್ರಚೋದನೆಗೆ ಒಳಗಾಗಿ ಹೇಳುವ ಮಾತುಗಳಿಗೆ ಬೆಲೆ ನೀಡಬೇಕಿಲ್ಲ. 13 ಕುಟುಂಬಗಳಿವೆ ಎನ್ನುವುದೆಲ್ಲ ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದರು.
ಉಪವಿಭಾಗಾಧಿಕಾರಿ ಮಂಜುನಾಥ್ ಮಾತನಾಡಿ, ಅಧಿಕಾರಿಗಳು ಮತ್ತೊಮ್ಮೆ ಕಾಲನಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಕುರಿತು ಸಮಗ್ರ ವರದಿ ನೀಡಬೇಕು. ನಂತರ ಅರ್ಹ ಕುಟುಂಬಗಳನ್ನು ಗುರುತಿಸಿ ಸವಲತ್ತು ನೀಡಲು ಕ್ರಮವಹಿಸಿ ಎಂದು ಸೂಚಿಸಿದರು.