ಎಚ್.ಡಿ.ಕೋಟೆ ಪಟ್ಟಣದ ಹ್ಯಾಂಡ್ ಪೋಸ್ಟ್ ನ ಸರಗೂರು ರಸ್ತೆಯಲ್ಲಿ ನೂತನವಾಗಿ ನಿರ್ಮಾಣ ಆಗಿರುವ ಪಾರ್ವತಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಶ್ರೀ ಮಹಾದೇವ ಸ್ವಾಮೀಜಿ ಚಾಲನೆ ನೀಡಿದರು. ಪುಟ್ಟರಾಜು, ಪಾರ್ವತಿ, ಡಾ.ಚಂದ್ರಶೇಖರ್ ಇದ್ದರು.
- ಪಾರ್ವತಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ
ಎಚ್.ಡಿ.ಕೋಟೆ : ಗ್ರಾಮೀಣ ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆ ಪ್ರಾರಂಭ ಆಗುತ್ತಿರುವುದು ತುಂಬ ಅನುಕೂಲಕರವಾಗಿದೆ ಎಂದು ಬಿಡಗಲು ಪಡುವಲ ಮಠದ ಶ್ರೀಮಹಾದೇವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಹ್ಯಾಂಡ್‌ಪೋಸ್ಟ್‌ನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪಾರ್ವತಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಹ್ಯಾಂಡ್‌ಪೋಸ್ಟ್‌ನಲ್ಲಿ ನೂತನ ಆಸ್ಪತ್ರೆ ಪ್ರಾರಂಭ ಆಗಿರುವುದ ಕಾಡಂಚಿನ ಭಾಗದ ಜನರಿಗೆ ತುಂಬ ಅನುಕೂಲ ಆಗಲಿದೆ. ಅದರಲ್ಲೂ ಎಲ್ಲ ರೀತಿಯ ಸೌಲಭ್ಯ ದೊರಕುವಂತೆ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದರು.
ಶಸ್ತ್ರಚಿಕಿತ್ಸೆ ಸೇರಿದಂತೆ ವೈದ್ಯಕೀಯ ಸೇವೆ ಪಡೆಯಲು ಇಲ್ಲಿನ ಜನರು ಮೈಸೂರಿಗೆ ತೆರಳಬೇಕಿತ್ತು. ಇದನ್ನು ಮನಗಂಡು ಆಸ್ಪತ್ರೆ ಪ್ರಾರಂಭಿಸಿರುವುದು ಮಾನವೀಯತೆಯನ್ನು ತೋರುತ್ತದೆ. ಗ್ರಾಮೀಣ ಭಾಗದ ಜನರಿಗೆ ರಿಯಾಯಿತಿ ದರದಲ್ಲಿ ವೈದ್ಯಕೀಯ ಸೇವೆ ನೀಡುವ ದಿಕ್ಕಿನಲ್ಲಿ ಮನಸ್ಸು ಮಾಡಿದರೆ ಒಳ್ಳೆಯ ಬೆಳವಣಿಗೆ. ಇದೊಂದು ಸಮಾಜ ಸೇವೆ ಎಂದು ತಿಳಿದು ಆಸ್ಪತ್ರೆ ಮಾಲೀಕರು ಕೆಲಸ ಮಾಡಬೇಕು ಎಂದರು.
ಆಸ್ಪತ್ರೆ ಮಾಲೀಕ ಪುಟ್ಟರಾಜು ಮಾತನಾಡಿ, ಹಿಂದುಳಿದ ತಾಲೂಕು, ಕಾಡಂಚಿನ ಪ್ರದೇಶ ಎಲ್ಲ ಆರೋಗ್ಯ ಸೌಲಭ್ಯಕ್ಕೆ ಮೈಸೂರಿಗೆ ಹೋಗಬೇಕಿತ್ತು. ಅದನ್ನು ಮನಗಂಡು ಹ್ಯಾಂಡ್‌ಪೋಸ್ಟ್‌ನಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಕಡಿಮೆ ದರದಲ್ಲಿ ನುರಿತ ವೈದ್ಯರ ಮೂಲಕ ಉತ್ತಮ ಸೇವೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಬಿಪಿಎಲ್, ಯಶಸ್ವಿನಿ, ಇಎಸ್‌ಐ ಸೇವೆ ಸೇರಿದಂತೆ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಸೇವೆ ನೀಡಲು ಸರ್ಕಾರದಿಂದ ಅನುಮತಿ ಪಡೆದು ಉತ್ತಮ ಸೇವೆ ನೀಡುತ್ತೇವೆ ಎಂದು ಭರವಸೆ ನೀಡಿದರು.
ಕರ್ತವ್ಯ ನಿರತ ವೈದ್ಯ ಡಾ.ಆರೀಫ್, ಮೂಳೆ ತಜ್ಞ ಡಾ.ಅರುಣ್, ಹಿರಿಯ ಮಕ್ಕಳ ತಜ್ಞ ಡಾ. ಚಂದ್ರಶೇಖರ್, ವೈದ್ಯಾಧಿಕಾರಿ ಡಾ.ಭಾಸ್ಕರ್, ಆಸ್ಪತ್ರೆ ಮಾಲೀಕರಾದ ಪಾರ್ವತಿ, ಸಿಬ್ಬಂದಿ ಅನಿತಾ, ಪುಟ್ಟನಾಯಕ, ವಿಜಯ್, ಉಮೇಶ್, ಸುಧಾ, ಪುಷ್ಪಾ, ಸಂಗೀತಾ, ಅನಿತಾ, ಕೃಷ್ಣವೇಣಿ, ಮನೋಜ್, ಅಭಿಷೇಕ್, ಮೋಹಿತ್, ಕಿಶೋರ್, ಸಚಿನ್, ಶಿವು, ಸಹನಾ, ಸೌಮ್ಯಾ, ಮಾಲತಿ ಇದ್ದರು.