ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕ ವತಿಯಿಂದ ಸೋಮವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರಕಾಶ್, ರುಕ್ಮಾಂಗದ, ಬಸವರಾಜು, ಶಿವಣ್ಣ, ಮಹಾದೇವನಾಯ್ಕ, ಗಜೇಂದ್ರಕುಮಾರ್, ಸೌಮ್ಯಾ, ಮೊಹಮ್ಮದ್ ಇಷಾಕ್, ಗಣೇಶ್ ಇದ್ದರು.
- ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದಿಂದ ಮನವಿ
ಇತ್ತೀಚಿಗೆ ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿ ನಡೆದ ಪಿಡಿಒ ಮುಕ್ತಂ ಹುಸೇನ್ ಕರಡಿಗುಡ್ಡ ಅವರ ಆತ್ಮಹತ್ಯೆಗೆ ನ್ಯಾಯ ಒದಗಿಸಬೇಕು. ಭವಿಷ್ಯದಲ್ಲಿ ಇಂತಹ ಅನಾಹುತಗಳು ಆಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕ ವತಿಯಿಂದ ಸೋಮವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್‌ಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂಬಂಧ ಉನ್ನತಮಟ್ಟದ ತನಿಖೆಯಾಗಬೇಕು, ಅವರ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳು ಸಿಗಬೇಕು. ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒಗಳಿಗೆ ಒತ್ತಡರಹಿತವಾಗಿ ಕೆಲಸ ಮಾಡುವ ವಾತಾವರಣ ಸೃಷ್ಠಿಸಬೇಕು. ಹಿರಿಯ ಅಧಿಕಾರಿಗಳು ಒತ್ತಡ ಹಾಕದೇ ಮಾರ್ಗದರ್ಶಕರಾಗಿ ಸಹಕರಿಸಬೇಕು. ಸಣ್ಣಪುಟ್ಟ ಆಡಳಿತಾತ್ಮಕ ಕಾರಣಗಳಿಗೆ ಪಿಡಿಒಗಳನ್ನು ಅಮಾನತು ಮಾಡುವುದನ್ನು ನಿಲ್ಲಿಸಬೇಕು. ಕಾಲಮಿತಿಯೊಳಗೆ ತನಿಖೆ ಹಾಗೂ ಅಮಾನತು ತೆರವುಗೊಳಿಸಬೇಕು. ಮೀನಾಕ್ಷಿ ಸುಂದರಂ ಸಮಿತಿ ವರದಿ ಜಾರಿಗೊಳಿಸಬೇಕು. ದಾಖಲೆರಹಿತ ವರದಿಗಳ ಆಧಾರದ ಮೇಲೆ ಬರುವ ದೂರುಗಳನ್ನು ತನಿಖೆ ಮಾಡುವುದನ್ನು ನಿಲ್ಲಿಸಬೇಕು. ಈ ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಪಿಡಿಒಗಳ ಪರವಾದ ಸ್ಪಷ್ಟ ಆದೇಶಗಳನ್ನು ಹೊರಡಿಸುವ ಮೂಲಕ ಮತ್ತೊಬ್ಬ ಅಧಿಕಾರಿ ಆತ್ಮಹತ್ಯೆಯ ಹಾದಿ ಹಿಡಿಯದಂತೆ ತಡೆಯಬೇಕೆಂದು ಮನವಿ ಮಾಡಿದರು.
ಮನವಿ ಸ್ಪೀಕರಿಸಿದ ಎಸ್.ಯುಕೇಶ್‌ಕುಮಾರ್ ಮಾತನಾಡಿ, ಸರ್ಕಾರ ಯಾವಾಗಲೂ ನಿಮ್ಮ ಪರವಾಗಿ ಇರುತ್ತದೆ. ಸೂಕ್ಷ್ಮ ವಿಷಯಗಳಿಗೆ ಪಿಡಿಓಗಳು ಆತ್ಮಹತ್ಯೆಗೆ ಶರಣಾಗಬಾರದು. ಹಿರಿಯ ಅಧಿಕಾರಿಗಳು ನಿಮ್ಮ ಜತೆಗಿರುತ್ತೇವೆ, ನಿಮ್ಮ ಮನವಿಯನ್ನು ಸರ್ಕಾರಕ್ಕೆ ರವಾನಿಸಲಾಗುವುದು ಎಂದರು.
ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್, ನಿಕಟಪೂರ್ವ ಅಧ್ಯಕ್ಷ ರುಕ್ಮಾಂಗದ, ಪ್ರಧಾನ ಕಾರ್ಯದರ್ಶಿ ಬಸವರಾಜು, ರಾಜ್ಯ ಪರಿಷತ್ ಸದಸ್ಯ ಶಿವಣ್ಣ, ಪದಾಧಿಕಾರಿಗಳಾದ ಮಹಾದೇವನಾಯ್ಕ, ಗಜೇಂದ್ರಕುಮಾರ್, ಸೌಮ್ಯಾ, ಮೊಹಮ್ಮದ್ ಇಷಾಕ್, ಗಣೇಶ್ ಇದ್ದರು.