ರಾಜ್ಯ ಅಲ್ಪಸಂಖ್ಯಾತ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಅವರಿಗೆ ಹುಣಸೂರು ತಾಲೂಕು ಅಲ್ಪಸಂಖ್ಯಾತ ಕ್ರೈಸ್ತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೂಡ್ಲೂರು ಎಂ.ಜಾರ್ಜ್ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.  
ಮೈಸೂರು

ಕ್ರೈಸ್ತ ಕಾಲನಿಗಳಲ್ಲಿ ಮೂಲಸೌಕರ್ಯ ಒದಗಿಸಿ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ಸಚಿವ ಜಮೀರ್ ಅಹಮದ್ ಅವರಿಗೆ ಅಲ್ಪಸಂಖ್ಯಾತ ಕ್ರೈಸ್ತ ಹಿತರಕ್ಷಣಾ ಸಮಿತಿ ಮನವಿ
ಹುಣಸೂರು : 2026-27ನೇ ಸಾಲಿನ ರಾಜ್ಯ ಆಯವ್ಯಯದಲ್ಲಿ ಕ್ರೈಸ್ತ ಕಾಲನಿಗಳಲ್ಲಿ ಮೂಲಸೌಕರ್ಯ, ಸ್ಮಶಾನ, ಸರ್ಕಾರಿ ಯೋಜನೆಗಳ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಲ್ಪಸಂಖ್ಯಾತ ಕ್ರೈಸ್ತ ಹಿತರಕ್ಷಣಾ ಸಮಿತಿ ವತಿಯಿಂದ ರಾಜ್ಯ ಅಲ್ಪಸಂಖ್ಯಾತ ಮತ್ತು ವಕ್ಫ್ ಬೋರ್ಡ್ ಸಚಿವ ಜಮೀರ್ ಅಹಮದ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅಲ್ಪಸಂಖ್ಯಾತ ಕ್ರೈಸ್ತ ಹಿತರಕ್ಷಣಾ ಸಮಿತಿ ತಾಲೂಕು ಅಧ್ಯಕ್ಷ ಕೂಡ್ಲೂರು ಎಂ.ಜಾರ್ಜ್, ರಾಜ್ಯ ಕ್ರೈಸ್ತ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರೊ.ಜೌಪಟ್‌ರ ನೇತೃತ್ವದಲ್ಲಿ ಇತ್ತೀಚೆಗೆ ಸಚಿವ ಜಮೀರ್ ಅಹಮದ್ ಅವರನ್ನು ಸಮುದಾಯದ ಮುಖಂಡರು, ಸಮಿತಿ ಪದಾಧಿಕಾರಿಗಳು, ಫಾಸ್ಟರ್‌ಗಳು, ಫಾದರ್‌ಗಳು ಮುಂತಾದವರು ಭೇಟಿಯಾಗಿ ಕ್ರೈಸ್ತರ ಪವಿತ್ರ ಯಾತ್ರಾಸ್ಥಳ ಜೆರೂಸೆಲಂ(ರೋಂ)ಗೆ ಹೋಗಿ ಬರುವ ಯಾತ್ರಾರ್ಥಿಗಳಿಗೆ ಸರ್ಕಾರದಿಂದ ಸಹಾಯಧನ ಕೋರಲಾಗಿದೆ. ಅಲ್ಲದೇ ಕ್ರೈಸ್ತ ಕಾಲನಿಗಳಲ್ಲಿ ಮೂಲಸೌಕರ್ಯ ಕಲ್ಪಿಸುವುದು, ಸ್ಮಶಾನ ಇಲ್ಲದ ಊರುಗಳಲ್ಲಿ ಸ್ಮಶಾನಾಭಿವೃದ್ಧಿ, ಬಡಕುಟುಂಬಗಳಿಗೆ ವಸತಿಸೌಲಭ್ಯ, ಆಡು, ಕುರಿ, ಹಸು ಸಾಕಣೆಗೆ ಆರ್ಥಿಕ ನೆರವು, ವಾಹನ ಖರೀದಿ, ಗಂಗಾಕಲ್ಯಾಣ ಯೋಜನೆಯ ಸವಲತ್ತುಗಳನ್ನು ನೀಡಲು ಒತ್ತಾಯಿಸಲಾಯಿತು.
ಮನವಿ ಸ್ವೀಕರಿಸಿದ ಸಚಿವರು ಮುಖ್ಯಮಂತ್ರಿಗಳ ಬಳಿ ಈ ಕುರಿತು ಚರ್ಚಿಸಿ ಅನುದಾನ ಮೀಸಲಿಗೆ ಒತ್ತಾಯಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಭೇಟಿ ವೇಳೆ ತಾಲೂಕಿನ ನೋಹನ್ನಾ ಸಹಕಾರ ಸಂಘದ ಅಧ್ಯಕ್ಷ ಎ.ಜಾರ್ಜ್ ಹಂಟ್, ನಿರ್ದೇಶಕರಾದ ಗೀತಾ, ಮಾಜಿ ಅಧ್ಯಕ್ಷ ಬಲವೇಲನ್, ಕಾರ್ಯದರ್ಶಿ ದೇವಮುತ್ತು, ಡೋನಾಲ್ಡ್ ಪ್ರಕಾಶ್, ರಾಮಪ್ಪ, ಜಾನ್ ಕ್ರಿಸ್ಟೋಫರ್, ಪ್ರಿಯಾಂಕಾ ಇತರರು ಇದ್ದರು.