ಹುಣಸೂರು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾ ಕೆ.ಹೊಂಗಯ್ಯ ಅವರಿಗೆ ದಲಿತ ಸಂಘರ್ಷ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು. ನಿಂಗರಾಜ ಮಲ್ಲಾಡಿ, ಶಿವರಾಜು, ಬಲ್ಲೇನಹಳ್ಳಿ ಕೆಂಪರಾಜು ಇತರರಿದ್ದರು. 
ಮೈಸೂರು

ದೊಂಬರ ಕಾಲನಿಗೆ ಮೂಲಸೌಕರ್ಯ ಕಲ್ಪಿಸಿ

ಶಿವಶಂಕರ್ ಎಂ. ಹೆಬ್ಬಳ್ಳ

ಪ್ರಮುಖ ಮುಖ್ಯಾಂಶಗಳು

  • ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಮನವಿ ಸಲ್ಲಿಕೆ
ಹುಣಸೂರು : ತಾಲೂಕಿನ ಮರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲೆಮಾರಿ ಸಮುದಾಯದ ದೊಂಬರ ಕಾಲನಿಯಲ್ಲಿ ವಸತಿ, ಸ್ಮಶಾನ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಶನಿವಾರ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ನಿಂಗರಾಜ್ ಮಲ್ಲಾಡಿ, ಪರಿಶಿಷ್ಟ ದೊಂಬರ ಕಾಲನಿಯಲ್ಲಿ 30 ನಿರ್ಗತಿಕ ಕುಟುಂಬಗಳು ಕಳೆದ 30 ವರ್ಷಗಳಿಂದ ಮೂಲ ಸೌಲಭ್ಯಗಳ ಕೊರತೆಯ ನಡುವೆಯೇ ಅತ್ಯಂತ ಸಂಕಷ್ಟದ ಬದುಕನ್ನು ಸಾಗಿಸುತ್ತಿದ್ದಾರೆ. ಸಮಿತಿಯ ಸತತ ಹೋರಾಟದ ನಂತರ ಆಶ್ರಯ ಯೋಜನೆಯಡಿ ನಿವೇಶನದ ಹಕ್ಕು ಪತ್ರಗಳನ್ನು ತಾಲೂಕು ಆಡಳಿತ ನೀಡಿದೆ. ಅಲೆಮಾರಿ ನಿಗಮಗಳಿಂದ 10 ಕುಟುಂಬಗಳಿಗೆ ಮನೆಗಳು, ಪ್ರಧಾನ ಮಂತ್ರಿ ರೋಜ್‌ಗಾರ್ ಯೋಜನೆಯಡಿ 4 ಮನೆಗಳು ಮಂಜೂರಾಗಿದ್ದು, ಈ ಬಡ ಕುಟುಂಬಗಳು ಮನೆ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಉಳಿದ ಕುಟುಂಬಗಳು ಮನೆ ಕಟ್ಟಲು 2 ಲಕ್ಷ ರೂ. ಸಾಲುತ್ತಿಲ್ಲವೆಂದು ಮನೆ ನಿರ್ಮಾಣ ಮಾಡಿಕೊಂಡಿಲ್ಲ. ಮನೆಗೆ 5 ಲಕ್ಷ ರೂ. ಮೀಸಲಿಡಬೇಕೆಂದು ಒತ್ತಾಯಿಸಲಾಗುತ್ತಿದೆ. ಕಾಲನಿಗೆ ರಸ್ತೆ, ಚರಂಡಿ, ಬೀದಿದೀಪ, ಅಂಬೇಡ್ಕರ್ ಭವನ, ಅಂಗನವಾಡಿ ಕಟ್ಟಡ ಮುಂತಾದ ಸೌಲಭ್ಯಗಳಿಲ್ಲದೆ ದಯನೀಯ ಸ್ಥಿತಿಯಲ್ಲಿ ವಾಸ ಮಾಡುತ್ತಿದ್ದಾರೆ. ಕಂದಾಯ ಇಲಾಖೆಯಿಂದ 20 ಗುಂಟೆ ಸ್ಮಶಾನ ಮಂಜೂರಾಗಿದೆ ಎಂದು ಹೇಳಿತ್ತಿದ್ದರು. ಆ ಜಾಗವು ಕಲ್ಲುಮಂಟಿಯಾಗಿರುವುದರಿಂದ ಶವಸಂಸ್ಕಾರ ಮಾಡಲು ಆಗದೆ ಈ ಅಲೆಮಾರಿ ಕುಟುಂಬಗಳು ಪರದಾಡುತ್ತಿದ್ದಾರೆ ಎಂದು ದೂರಿದರು.
ಈ ಬಗ್ಗೆ ತಹಸೀಲ್ದಾರ್ ಅವರು ಸರ್ಕಾರಿ ಜಾಗವನ್ನು ಪತ್ತೆ ಮಾಡಿ ಸ್ಮಶಾನಕ್ಕೆ ಯೋಗ್ಯವಾಗಿರುವ 20 ಗುಂಟೆ ಭೂಮಿಯನ್ನು ಮಂಜೂರು ಮಾಡಿಕೊಡಬೇಕು. ತಾ.ಪಂ. ಇಒ ಕಾಲನಿಗೆ ಬಂದು ಅಲೆಮಾರಿ ಜನರ ಸಮಸ್ಯೆಗಳನ್ನು ಖುದ್ದಾಗಿ ಮಾಹಿತಿ ಪಡೆದು ಅಲೆಮಾರಿ ಜನರಿಗೆ ಕನಿಷ್ಠ ಸೌಲಭ್ಯಗಳನ್ನು ಅಲೆಮಾರಿ ಅಭಿವೃದ್ಧಿ ನಿಗಮದ ವತಿಯಿಂದ ಮಂಜೂರು ಮಾಡಿಸಿ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಇಒ ಕೆ.ಹೊಂಗಯ್ಯ, ಸಮಸ್ಯೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸುವುದಾಗಿ ಭರವಸೆ ನೀಡಿದರು. ಮನವಿ ಸಲ್ಲಿಕೆ ವೇಳೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಭರತ್, ಮರದೂರು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಧರ್ಮೇದ್ರ, ತಾಲೂಕು ದಸಂಸ ಸಂಚಾಲಕ ಬಲ್ಲೇನಹಳ್ಳಿ ಕೆಂಪರಾಜು, ಅಲೆಮಾರಿ ಮುಖಂಡರಾದ ಶಿವರಾಜು, ಮಹಿಳೆಯರು ಹಾಜರಿದ್ದರು.