ಹುಣಸೂರು ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸದಸ್ಯೆ ನಾಗವೇಣಿ ಪೌರಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ಎಸಿ ಕೆ.ವಿ.ಕಾವ್ಯಾರಾಣಿ, ಡಿವೈಎಸ್‌ಪಿ ರವಿ, ತಹಸೀಲ್ದಾರ್ ನಿಸರ್ಗಪ್ರಿಯ, ಸಮಾಜ ಕಲ್ಯಾಣಾಧಿಕಾರಿ ಭರತ್‌ಕುಮಾರ್ ಇತರರು ಇದ್ದರು. 
ಮೈಸೂರು

ಸಫಾಯಿ ಕರ್ಮಚಾರಿಗಳಿಗೆ ಸವಲತ್ತು ತಲುಪಿಸಿ

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ ಸೂಚನೆ
  • 1ನೇ ತ್ರೈಮಾಸಿಕ ಜಾಗೃತಿ, ಉಸ್ತುವಾರಿ ಸಮಿತಿ ಸಭೆ
ಹುಣಸೂರು: ಸಫಾಯಿ ಕರ್ಮಚಾರಿಗಳಿಗೆ ಸರ್ಕಾರ ನೀಡುತ್ತಿರುವ ಎಲ್ಲ ಸವಲತ್ತುಗಳನ್ನು ತಲುಪಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದ್ದು, ನಿಗಾವಹಿಸಿ ಕಾರ್ಯನಿರ್ವಹಿಸಬೇಕೆಂದು ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯಾರಾಣಿ ಸೂಚಿಸಿದರು.
ನಗರದ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ 1ನೇ ತ್ರೈಮಾಸಿಕ ಸಫಾಯಿ ಕರ್ಮಚಾರಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಸಫಾಯಿ ಕರ್ಮಚಾರಿಗಳ ಕರ್ತವ್ಯಕ್ಕೆ ಅನುಕೂಲವಾಗುವಂತಹ ಉಡುಪುಗಳು, ಗ್ಲೌಸ್‌ಗಳು, ಶೂಗಳು, ಆರೋಗ್ಯತಪಾಸಣೆ ಮುಂತಾದ ಎಲ್ಲ ಸೌಲಭ್ಯಗಳು ಅವರಿಗೆ ನೀಡಿರಬೇಕು. ಈ ಕುರಿತು ಮುಂದಿನ ಸಭೆಯಲ್ಲಿ ಎಲ್ಲ ತಾಲೂಕು ಅಧಿಕಾರಿಗಳು ಚೆಕ್‌ಲಿಸ್ಟ್ ತಮಗೆ ನೀಡಬೇಕು. ಸಫಾಯಿಕರ್ಮಚಾರಿಗಳಿಗೆ ಬೆಳಗಿನ ತಿಂಡಿ ಶುಚಿಯಾಗಿ ಇರುವಂತೆ ನೋಡಿಕೊಳ್ಳಬೇಕು. ವರ್ಷಕ್ಕೊಮ್ಮೆ ಆಯೋಜಿಸುವ ಮಾಸ್ಟರ್ ಚೆಕ್‌ಅಪ್ ಕಡ್ಡಾಯವಾಗಿ ನಡೆಯಬೇಕು. ತಾಲೂಕಿನಲ್ಲಿರುವ ಕಾಯಂ ನೌಕರರ ಕುರಿತು ಮಾಹಿತಿ ಒದಗಿಸಬೇಕು ಎಂದು ಸೂಚಿಸಿದರು.
ಸಮಿತಿ ಸದಸ್ಯ ಕೆ.ಲಕ್ಷ್ಮಣ್ ಮಾತನಾಡಿ, ಹುಣಸೂರು ನಗರಸಭೆ ವ್ಯಾಪ್ತಿಯಲ್ಲಿ 20 ವರ್ಷಗಳಿಂದ ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾಯಂ ಪೌರಕಾರ್ಮಿಕರಿಗೆ ವಸತಿ ಸೌಲಭ್ಯವಿಲ್ಲ. ನಗರ ವ್ಯಾಪ್ತಿಯಲ್ಲಿ 34 ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸಲಾಗಿದೆ. ಈ ಪೈಕಿ ನಗರಸಭೆಯ 32 ಪೌರಕಾರ್ಮಿಕರಿಗೆ ಶಾಶ್ವತ ಸೂರು ಸಿಗುವಂತಾಗಲು ನಿವೇಶನ ನೀಡಬೇಕು. ಈ ಕುರಿತು ದೊಡ್ಡಹುಣಸೂರು ಸರ್ವೇ ನಂ.75ರಲ್ಲಿ ಇದ್ದ ಭೂಮಿ ದಾಖಲೆಗಳಲ್ಲಿ ಕರ್ದಾ ಭೂಮಿಯೆಂದು ನಮೂದಿತವಾಗಿದೆ. ಹಾಗಾಗಿ ಸರ್ವೇ ನಂ.73ರಲ್ಲಿ ಗುರುತಿಸಿಕೊಡಬೇಕೆಂದು ಒತ್ತಾಯಿಸಿದರು.
ಅಲ್ಲದೆ ನಗರಸಭೆಯ ನಗರೋತ್ಥಾನ ಯೋಜನೆಯಡಿ ನಿವೇಶನಕ್ಕಾಗಿ 96 ಲಕ್ಷ ರೂ.ಗಳ ಅನುದಾನ ಲಭ್ಯವಿದ್ದು, ಈ ಅನುದಾನವನ್ನು ಫಲಾನುಭವಿಗಳಿಗೆ ವಸತಿ ನಿರ್ಮಾಣಕ್ಕೆ ಬಳಸಿಕೊಳ್ಳುವಂತಾಗಬೇಕೆಂದು ಒತ್ತಾಯಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಶಿರಸ್ತೇದಾರ್ ಶ್ರೀಪಾದ್ ನಲವತ್ತವಾಡಕರ್, ಸರ್ವೇ ನಂ.73ರ ಭೂಮಿಯ ಒತ್ತುವರಿ ತೆರವುಗೊಳಿಸಲು ಸರ್ವೇ ಕಾರ್ಯಕ್ಕೆ ಕ್ರಮವಹಿಸಲಾಗಿದೆ. ಸರ್ವೇ ಕಾರ್ಯ ಸಂಪೂರ್ಣಗೊಂಡ ನಂತರ ಮುಂದಿನ ಕ್ರಮವಹಿಸುವುದಾಗಿ ತಿಳಿಸಿದರು.
ಪೌರಾಯುಕ್ತೆ ಕೆ.ಮಾನಸಾ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಮೊದಲಾಗಿ ನಿವೇಶನಗಳನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ನಗರೋತ್ಥಾನ ನಿಧಿಯು ಕೇವಲ ನಿವೇಶನ ಹೊಂದಿದವರಿಗೆ ತಲಾ 3ಲಕ್ಷ ರೂ.ಗಳ ಸಹಾಯಧನ ನೀಡುವ ಯೋಜನೆಯಾಗಿದೆ. ಹಾಗಾಗಿ ನಿವೇಶನ ಗುರುತಿಸಿದ ನಂತರ ಈ ಹಣವನ್ನು ನೇರವಾಗಿ ಫಲಾನುಭವಿ ಖಾತೆಗೆ ಜಮಾ ಮಾಡಬಹುದಾಗಿದೆ ಎಂದರು.
ಸಮಿತಿ ಸದಸ್ಯೆ ಎಚ್.ಡಿ.ಕೋಟೆ ತಾಲೂಕಿನ ನಾಗವೇಣಿ ಮಾತನಾಡಿ, ಎಚ್.ಡಿ.ಕೋಟೆ ತಾಲೂಕಿನ ಚಿಕ್ಕೆರೆ ಗ್ರಾಮದ ನಾಲ್ವರು ಪೌರಕಾರ್ಮಿಕರು ಕೃಷಿಕಾರ್ಯ ಮಾಡುತ್ತಿದ್ದು ಅವರು ಕೃಷಿ ಕಾರ್ಯನಡೆಸಿರುವ ಭೂಮಿಗೆ ಸಾಗುವಳಿ ಪತ್ರ ನೀಡಲು ಆಗ್ರಹಿಸಿದರು. ಅಲ್ಲದೆ, ಸರಗೂರು ತಾಲೂಕಿನಲ್ಲಿ ಪೌರಕಾರ್ಮಿಕರಿಗೆ ಸಮುದಾಯ ಭವನ ನಿರ್ಮಿಸಿಕೊಡಲು ಒತ್ತಾಯಿಸಿದರು. ಸರಗೂರು ಪುರಸಭೆ ಮುಖ್ಯಾಧಿಕಾರಿ ಸಂತೋಷ್ ಮಾತನಾಡಿ, ಶಾಸಕರ ನೇತೃತ್ವವದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಗುರುತಿಸಲಾಗಿದೆ ಎಂದು ಹೇಳಿದರು.
ಸದಸ್ಯ ಕೆ.ಲಕ್ಷ್ಮಣ್ ಮಾತನಾಡಿ, ನಗರಸಭೆಯ ಪೌರಕಾರ್ಮಿಕರಿಗಾಗಿ ನಿರ್ಮಿಸಿರುವ ಕ್ಯಾಂಟೀನ್ ಮತ್ತು ವಿಶ್ರಾಂತಿಗೃಹ ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗುತ್ತಿಲ್ಲವೆಂದು ದೂರಿದಾಗ, ಪೌರಾಯುಕ್ತೆ ಕೆ.ಮಾನಸ ಮಾತನಾಡಿ, ನಗರವ್ಯಾಪ್ತಿಯ ಖಾಸಗಿ ಕ್ಯಾಂಟೀನ್‌ನವರು 36 ರೂ.ಗಳಿಗೆ ಅತ್ಯುತ್ತಮ ತಿಂಡಿ ನೀಡುತ್ತಿದ್ದಾರೆ. ಇದಕ್ಕೆ ಪೌರಕಾರ್ಮಿಕರು ಸಹಮತ ವ್ಯಕ್ತಪಡಿಸಿದ್ದಾರೆ. ಕಟ್ಟಡದಲ್ಲಿ ವಿಶ್ರಾಂತಿಗಾಗಿ ಅಗತ್ಯ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಹುಣಸೂರು ಉಪವಿಭಾಗ ವ್ಯಾಪ್ತಿಯ ಹುಣಸೂರಿನಲ್ಲಿ 37 ಪೌರಕಾರ್ಮಿಕರು ಕಾಯಂ ನೌಕರರಾಗಿದ್ದಾರೆ. ಅಂತೆಯೆ, ಸರಗೂರು ತಾಲೂಕಿನಲ್ಲಿ 7, ಕೆ.ಆರ್.ನಗರ 25, ಪಿರಿಯಾಪಟ್ಟಣ 14 ಮತ್ತು ಎಚ್.ಡಿ.ಕೋಟೆ ತಾಲೂಕಿನಲ್ಲಿ 23 ಪೌರಕಾರ್ಮಿಕರು ಕಾಯಂ ನೌಕರರಾಗಿದ್ದಾರೆ ಎಂದು ಸಭೆಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಡಿವೈಎಸ್‌ಪಿ ರವಿ, ಪಿರಿಯಾಪಟ್ಟಣ ತಾಲೂಕು ತಹಸೀಲ್ದಾರ್ ನಿಸರ್ಗಪ್ರಿಯ, ಸಾಲಿಗ್ರಾಮ ತಾಲೂಕಿನ ರುಕಿಯಾ ಬೇಗಂ, ಸಮಾಜ ಕಲ್ಯಾಣಾಧಿಕಾರಿ ಭರತ್‌ಕುಮಾರ್, ಗಿರಿಜನ ಕಲ್ಯಾಣಾಧಿಕಾರಿ .ಗಂಗಾಧರ್, ಇತರ ಅಧಿಕಾರಿಗಳು ಹಾಜರಿದ್ದರು.