ಅಂತರಸಂತೆ ಪೊಲೀಸ್ ಠಾಣೆಯಲ್ಲಿ ರೆಸಾರ್ಟ್ ಹಾಗೂ ಹೋಂಸ್ಟೇ ಮಾಲೀಕರು, ವ್ಯವಸ್ಥಾಪಕರೊಂದಿಗೆ ಸಬ್‌ಇನ್‌ಸ್ಪೆಪೆಕ್ಟರ್ ಚಂದ್ರ ಹಾಸನ್ ಸಭೆ ನಡೆಸಿದರು.  
ಮೈಸೂರು

ರೆಸಾರ್ಟ್ ಸಿಬ್ಬಂದಿಯ ಪೂರ್ವಾಪರ ಮಾಹಿತಿ ನೀಡಿ

ಲೋಕೇಶ್ ಮನು. ಡಿ
ಎಚ್.ಡಿ.ಕೋಟೆ: ಹೋಂಸ್ಟೇ, ರೆಸಾರ್ಟ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಪೂರ್ವಾಪರ ಮಾಹಿತಿಗಾಗಿ ಕಡ್ಡಾಯವಾಗಿ ಠಾಣೆಗೆ ತಿಳಿಸಿ ಪರಿಶೀಲನೆ ಮಾಡಿಸಬೇಕು ಎಂದು ಅಂತರಸಂತೆ ಠಾಣೆ ಪಿಎಸೈ ಚಂದ್ರಹಾಸ್ ನಾಯಕ ಸೂಚಿಸಿದರು.
ತಾಲೂಕಿನ ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಠಾಣಾ ವ್ಯಾಪ್ತಿಯ ಎಲ್ಲ ರೆಸಾರ್ಟ್ ಹಾಗೂ ಹೋಂಸ್ಟೇ ಮಾಲೀಕರು, ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿದ ಅವರು, ಕೊಡಗಿನ ಹೋಂಸ್ಟೇ ಒಂದರಲ್ಲಿ ಅಲ್ಲಿನ ಸಿಬ್ಬಂದಿ ಇಬ್ಬರು ವಿದೇಶಿ ಪ್ರವಾಸಿಯೊಬ್ಬರ ಮೇಲೆ ಅತ್ಯಾಚಾರ ಎಸಗಿರುವ ವಿಚಾರ ಬೆಳಕಿಗೆ ಬಂದಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಲಾಗಿದೆ. ಹೀಗಾಗಿ, ಇಲಾಖೆ ಮುಂಜಾಗ್ರತಾ ಕ್ರಮ ವಹಿಸಿದ್ದು, ನಿಮ್ಮ ರೆಸಾರ್ಟ್‌ಗಳಲ್ಲಿ ಕೆಲಸ ಮಾಡುವ ಎಲ್ಲ ಸಿಬ್ಬಂದಿ ಪೊಲೀಸ್ ವೆರಿಫಿಕೇಶನ್ ಮಾಡಿಸಬೇಕು. ಸೇವಾಸಿಂಧು ಮೂಲಕ ಅವರ ವೆರಿಫಿಕೇಶನ್ ಮಾಡಬಹುದಾಗಿದ್ದ ಕೂಡಲೇ ನಿಮ್ಮ ಸಿಬ್ಬಂದಿಗೆ ತಿಳಿಸಿ ಎಂದು ಸೂಚಿಸಿದರು.
ನಿಮ್ಮ ರೆಸಾರ್ಟ್ ಹಾಗೂ ಹೋಂಸ್ಟೇಗಳಿಗೆ ಬರುವ ಪ್ರವಾಸಿಗರ ಮಾಹಿತಿ ಸಂಗ್ರಹಿಸಬೇಕು. ಅವರ ಸರಿಯಾದ ಮೊಬೈಲ್ ನಂಬರ್ ಪಡೆದುಕೊಳ್ಳಬೇಕು. ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು. ಜತೆಗೆ ವಿದೇಶಿ ಪ್ರವಾಸಿಗರು ಬಂದಾಗ ತಪ್ಪದೇ ಠಾಣೆ ಸಿ-ಫಾರ್ಮ್ ಸಲ್ಲಿಸಬೇಕು ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಎಲ್ಲ ರೆಸಾರ್ಟ್ ಹಾಗೂ ಹೋಂಸ್ಟೇಗಳು ನಿಮ್ಮ ನಿಮ್ಮ ದಾಖಲೆಗಳನ್ನು ಕೂಡಲೇ ಸಲ್ಲಿಸಬೇಕು. ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆದಿರುವುದು, ರೆಸಾರ್ಟ್‌ಗಳ ಭೂ ಪರಿವರ್ತನೆಯಾಗಿರುವುದು ಸೇರಿದಂತೆ ಇತರ ಅಗತ್ಯ ದಾಖಲೆಗಳನ್ನು ನೀಡಬೇಕು. ಇವು ಇಲ್ಲದೆ ಮುಂದುವರಿದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೇ ರೆಸಾರ್ಟ್‌ಗಳಿಗೆ ನಮ್ಮ ಸಿಬ್ಬಂದಿ ಆಗಾಗ್ಗೆ ಭೇಟಿ ನೀರಿ ಪರಿಶೀಲಿಸುತ್ತಿರುತ್ತಾರೆ.
ಈ ಸಂದರ್ಭದಲ್ಲಿ ಪ್ರವಾಸಿಗರ ದಾಖಲೆ, ಸಿಸಿ ಕ್ಯಾಮರಾ ಪರಿಶೀಲಿಸುತ್ತಾರೆ. ಜತೆಗೆ ಯಾವುದಾದರೂ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದರೆ ಶೀಘ್ರವೇ ಕ್ರಮವಹಿಸಬೇಕಾಗುತ್ತದ ಎಂದು ಎಚ್ಚರಿಸಿದರು.
ಸಿಸಿ ಕ್ಯಾಮರಾಗಳ ರೆಕಾರ್ಡ್ ಡಾಟೆ ಒಂದು ತಿಂಗಳವರೆಗೆ ಇರಲಿ. ಸಿಸಿ ಕ್ಯಾಮರಾ ಇಲ್ಲದವರು ಕೂಡಲೇ ಕ್ಯಾಮರಾ ಅಳವಡಿಸಬೇಕು ಎಂದು ಸೂಚಿಸಿದರು. ಇದೇ ಅಂತರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ರೆಸಾರ್ಟ್‌ಗಳು ಹಾಗೂ ಹೋಂಸ್ಟೇಗಳ ಮಾಲೀಕರು, ಇಲಾಖೆಯ ಸಿಬ್ಬಂದಿ ಇದ್ದರು.