ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ದಿಶಾ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸುನೀಲ್‌ಬೋಸ್, ಟಿ.ಎಸ್.ಶ್ರೀವತ್ಸ, ಜಿ.ಡಿ.ಹರೀಶ್‌ಗೌಡ, ಅಶ್ವಿನ್‌ಕುಮಾರ್, ಜಿ.ಲಕ್ಷ್ಮೀಕಾಂತರೆಡ್ಡಿ, ಎಸ್. ಯುಕೇಶ್‌ಕುಮಾರ್, ಸೀಮಾ ಲಾಟ್ಕರ್, ಮಲ್ಲಿಕಾರ್ಜುನ್ ಬಾಲದಂಡಿ ಇತರರಿದ್ದರು.
- ಬರದಿಂದ ರೈತರ ತೊಂದರೆಯಲ್ಲಿದ್ದಾರೆ. ಬೆಳೆ ನಷ್ಟವಾಗಿರುವ ರೈತರಿಗೆ ವಿಮಾ ಪರಿಹಾರದ ಮೊತ್ತ ಸಮರ್ಪಕವಾಗಿ ತಲುಪಬೇಕು
- ಬೆಳೆಯ ಪರಿಸ್ಥಿತಿ ಹೇಗಿದೆ ಎಂಬುದರ ಕುರಿತು ಜಂಟಿ ಸರ್ವೆ ನಡೆಸಿ ಅಧಿಕಾರಿಗಳು ವರದಿ ನೀಡಬೇಕು
ಮೈಸೂರು:ಬೆಳೆ ನಷ್ಟವಾಗಿರುವ ರೈತರಿಗೆ ವಿಮಾ ಪರಿಹಾರ ಸಮರ್ಪಕವಾಗಿ ದೊರೆಯಲು ಅಧಿಕಾರಿಗಳು ಜಾಗ್ರತೆ ವಹಿಸಬೇಕು ಎಂದು ಉಕ್ಕು ಮತ್ತು ಬೃಹತ್ ಕೈಗಾರಿಕಾ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈಗ ಬರದಿಂದ ರೈತರ ತೊಂದರೆಯಲ್ಲಿದ್ದಾರೆ. ಬೆಳೆ ನಷ್ಟವಾಗಿರುವ ರೈತರಿಗೆ ವಿಮಾ ಪರಿಹಾರದ ಮೊತ್ತ ಸಮರ್ಪಕವಾಗಿ ತಲುಪಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಿಳಿಸಿದರು.
ಮುಸುಕಿನ ಜೋಳಕ್ಕೆ ಬಿಳಿ ಸುಳಿರೋಗ ಬಂದು ಹೆಚ್ಚಿನ ಬಳೆ ನಷ್ಟವಾಗಿದ್ದು, ವಿಶೇಷವಾಗಿ ಪರಿಗಣಿಸಿ ಬೆಳೆ ನಷ್ಟದ ಪರಿಹಾರ ನೀಡಲು ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ರಾಜ್ಯದಲ್ಲಿ ತೀವ್ರ ಬರ ಉಂಟಾಗಿರುವುದರಿಂದ ಜಿಲ್ಲೆಯಲ್ಲಿ ರೈತರು ಬಿತ್ತನೆ ಮಾಡಿರುವ ಬೆಳೆಯ ಪರಿಸ್ಥಿತಿ ಹೇಗಿದೆ ಎಂಬುದರ ಕುರಿತು ಜಂಟಿ ಸರ್ವೆ ನಡೆಸಿ ಅಧಿಕಾರಿಗಳು ವರದಿ ನೀಡಬೇಕು. ಮೈಸೂರು ಜಿಲ್ಲೆಯ ಎಂಟು ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದ್ದು, ಬರ ಪರಿಹಾರ ಸೌಲಭ್ಯಗಳು ರೈತರಿಗೆ ಪಾರದರ್ಶಕವಾಗಿ ದೊರೆಯುವಂತೆ ನಿಗಾ ವಹಿಸಬೇಕು ಎಂದರು.
ಡಿಸೆಂಬರ್ ಒಳಗೆ ಪೂರ್ಣಗೊಳಿಸಿ:
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಮೈಸೂರು-ಕುಶಾಲನಗರ ಹೆದ್ದಾರಿ 275 ಅನ್ನು ಡಿಸೆಂಬರ್ 2027ರ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು. ಮಣಿಪಾಲ್ ಆಸ್ಪತ್ರೆ ಜಂಕ್ಷನ್ ಫ್ಲೈ ಓವರ್ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಂಡು ನಿಗದಿತ ಸಮಯದೊಳಗೆ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಹೇಳಿದರು.
ಜಿಲ್ಲೆಯಲ್ಲಿರುವ ಅಪಘಾತ ವಲಯಗಳನ್ನು ಗುರುತಿಸಿ ಅಪಘಾತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಹುಣಸೂರು ತಾಲೂಕಿನ ಲಕ್ಷ್ಮಣತೀರ್ಥ ನದಿಯ ಸೇತುವೆ ಕಾಮಗಾರಿ ವಿಳಂಬವಾಗಿದ್ದು, ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಮಾತನಾಡಿ, ಸುಯೇಜ್ ಫಾರಂನಲ್ಲಿ ಕೇಂದ್ರ ಸರ್ಕಾರದ ನೆರವಿನಿಂದ ಐದು ಲಕ್ಷ ಟನ್ ಕಸ ವಿಲೇವಾರಿಯನ್ನು ಮೈಸೂರು ಮಹಾನಗರ ಪಾಲಿಕೆಯಿಂದ ಮಾಡಲಾಗಿದೆ. ಉಳಿದ 2 ಲಕ್ಷ ಟನ್ ಕಸ ವಿಲೇವಾರಿ ಮಾಡಲು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಮೈಸೂರು ಮಹಾನಗರ ಪಾಲಿಕೆಗೆ ಸೂಚನೆ ನೀಡಿದರು.
ರಾಜ್ಯದಲ್ಲಿಯೇ ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಕೊರತೆ ಆಗಿದ್ದು, ಶೇ.70 ರಿಂದ 75 ಬೆಳೆ ನಷ್ಟ ಆಗಿದೆ. ಆಗಸ್ಟ್ ತಿಂಗಳಲ್ಲಿ ಶೇ.56 ಮಳೆ ಕೊರತೆಯಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಯುಕೇಶ್‌ಕುಮಾರ್ ಮಾತನಾಡಿ, ವಿಬಿಜಿ ರಾಮ್ ಜಿ ಯೋಜನೆಯು ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಜೂ.1 ರಿಂದ ಪ್ರಗತಿಯಲ್ಲಿದೆ. ಈ ಹಿಂದೆ ಇದ್ದ ನರೇಗಾ ಯೋಜನೆಯು ವಿಬಿಜಿ ರಾಮ್ ಜಿ ಯೋಜನೆಯಾಗಿ ಬದಲಾಗಿದ್ದು, ಗ್ರಾಮ ಪಂಚಾಯಿತಿಗಳಲ್ಲಿ ಮಾನವ ದಿನಗಳನ್ನು ಸೃಜನೆ ಮಾಡಿ ಜಾಬ್ ಕಾರ್ಡ್ ನೀಡಿ ಕೆಲಸವನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಜಂಟಿ ಕೃಷಿ ನಿರ್ದೇಶಕ ಕೆ.ಎಚ್.ರವಿ ಮಾತನಾಡಿ, ಜಿಲ್ಲೆಯಲ್ಲಿ ಜೂನ್ ಒಂದರಿಂದ ಇಲ್ಲಿಯವರೆಗೆ ಶೇ.56 ಮಳೆ ಕೊರತೆ ಇದೆ. 3,76,69 ಹೆಕ್ಟರ್ ಬಿತ್ತನೆ ಗುರಿ ಇದ್ದು, ಇಲ್ಲಿಯವರೆಗೆ 1,67,99 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. 22,845 ರೈತರು ಬೆಳೆ ವಿಮೆ ಮಾಡಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಚಾಮರಾಜನಗರ ಲೋಕಸಭಾ ಸದಸ್ಯರಾದ ಸುನಿಲ್ ಬೋಸ್, ಶಾಸಕರಾದ ಟಿ.ಎಸ್.ಶ್ರೀವತ್ಸ, ಜಿ.ಡಿ. ಹರೀಶ್‌ಗೌಡ, ದಿಶಾ ಸಮಿತಿ ಸದಸ್ಯ ಅಶ್ವಿನ್‌ಕುಮಾರ್, ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಇತರರು ಇದ್ದರು.