ಕುಡಿಯುವ ನೀರಿನ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಬಸವಟ್ಟಿಗೆ ಗ್ರಾಮಸ್ಥರು ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಜವರಯ್ಯ, ನಾಗೇಂದ್ರ, ಕೃಷ್ಣಮೂರ್ತಿ, ಪಿ.ಕೃಷ್ಣಮೂರ್ತಿ, ಶಂಕರನಾಯಕ ಇತರರಿದ್ದರು. 
ಮೈಸೂರು

ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸಿ

ಅಭಿನಯ್ ಎಚ್.ಎಂ

ಪ್ರಮುಖ ಮುಖ್ಯಾಂಶಗಳು

  • ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಕೆ
  • ಹೆಡತಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಟ್ಟಿಗೆ ಗ್ರಾಮಸ್ಥರು
ನಂಜನಗೂಡು: ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡುವಂತೆ ಆಗ್ರಹಿಸಿ ಬುಧವಾರ ತಾಲೂಕಿನ ಹೆಡತಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಟ್ಟಿಗೆ ಗ್ರಾಮಸ್ಥರು ಖಾಲಿ ಕೊಡ ಹಿಡಿದು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರಿತಪಿಸುತ್ತಿದ್ದಾರೆ. ಮೂರು ದಿನಗಳಿಗೊಮ್ಮೆ ಒಂದೇ ಬಾರಿ ನೀರು ಬಿಡುತ್ತಿದ್ದು, ಇದರಿಂದ ತೊಂದರೆ ಆಗುತ್ತಿದೆ ಎಂದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು.
ಗ್ರಾಪಂ ಮಾಜಿ ಸದಸ್ಯ ಜವರಯ್ಯ ಮಾತನಾಡಿ, ಬಸವಟ್ಟಿಗೆ ಗ್ರಾಮದಲ್ಲಿ ಜೆಜೆಎಂ ಪೈಪ್‌ಲೈನ್ ಅಳವಡಿಸಿ ಎರಡು ವರ್ಷ ಆಗಿದೆ. ಆದರೆ ಕುಡಿಯುವ ನೀರು ಮಾತ್ರ ಸರಬರಾಜು ಆಗುತ್ತಿಲ್ಲ. ಮೂರು ದಿನಗಳಿಗೊಮ್ಮೆ ನೀರನ್ನು ಪೂರೈಕೆ ಮಾಡುತ್ತಿದ್ದಾರೆ. ಅರ್ಧ ಗಂಟೆ ಮಾತ್ರ ನೀರನ್ನು ಬಿಡುತ್ತಿರುವುದರಿಂದ ಕುಡಿಯುವ ನೀರಿಗೆ ಮತ್ತು ಇತರ ಚಟುವಟಿಕೆಗೆ ತೊಂದರೆಯಾಗಿದೆ.
ಗುಂಡಿಯೊಳಗೆ ಹಿಡಿದು ನೀರನ್ನು ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ನಿವಾಸಿಗಳಿಗೆ ತೊಂದರೆ ಅನುಭವಿಸುವಂತಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಜಲಜೀವನ್ ಮಿಷನ್ ಯೋಜನೆ ಸರಿಪಡಿಸಿ ನೀರನ್ನು ಬಿಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಅಂಬೇಡ್ಕರ್ ಸೇನೆ ಅಧ್ಯಕ್ಷ ಬಸವಟ್ಟಿಗೆ ನಾಗೇಂದ್ರ ಮಾತನಾಡಿ, ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕಾಮಗಾರಿ ನಡೆಸಲಾಗಿದೆ. ಕಾಮಗಾರಿ ಪೂರ್ಣಗೊಂಡಿಲ್ಲವಾದರೂ ಗ್ರಾಮ ಪಂಚಾಯಿತಿಗೆ ಸುಪರ್ದಿಗೆ ತೆಗೆದುಕೊಂಡಿದೆ. ಕಾಮಗಾರಿ ಪ್ರಾರಂಭಿಸಿ ಎರಡು ವರ್ಷಗಳಾಗಿವೆ. ಜೆಜೆಎಂ ಯೋಜನೆಯ ನಲ್ಲಿಗಳು ತುಕ್ಕು ಹಿಡಿದು, ಮುರಿದು ಬಿದ್ದಿವೆ. ಇದನ್ನು ಸರಿಪಡಿಸಿ ಗ್ರಾಮಕ್ಕೆ ಸಮರ್ಪಕವಾಗಿ ಕುಡಿಯುವ ನೀರನ್ನು ಪೂರೈಕೆ ಮಾಡುವಂತೆ ಗ್ರಾಮ ನೈರ್ಮಲ್ಯ ಮತ್ತು ಕುಡಿಯುವ ನೀರು ಇಲಾಖೆಯ ಎಇಇ ಮನು, ಪಿಡಿಒ ರಾಜಶೇಖರ್ ಅವರ ಗಮನಕ್ಕೆ ತರಲಾಯಿತಾದರೂ ಉಡಾಫೆಯಿಂದ ಉತ್ತರಿಸುತ್ತಿದ್ದಾರೆ. ಸ್ಥಳಕ್ಕೆ ತಾಪಂ ಇಒ ಬರುವತನಕ ಹೋರಾಟ ನಿಲ್ಲಿಸುವುದಿಲ್ಲ. ಗ್ರಾಮಸ್ಥರ ಸಮಸ್ಯೆ ಬಗೆಹರಿಸದೆ ಕಾಲಹರಣ ಮಾಡುತ್ತಿರುವ ಪಿಡಿಒ ರಾಜಶೇಖರ್ ಅವರನ್ನು ಈ ಕೂಡಲೇ ವರ್ಗಾವಣೆ ಮಾಡಿ ಶಿಸ್ತು ಕ್ರಮ ಕೈಗೊಳ್ಳಬೇಕು.ಆ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದಸಂಸ ವಿಭಾಗೀಯ ಸಂಘಟನಾ ಸಂಚಾಲಕ ಪಿ.ಕೃಷ್ಣಮೂರ್ತಿ, ದಸಂಸ ತಾಲೂಕು ಸಂಘಟನಾ ಸಂಚಾಲಕ ಪಿ.ಕೃಷ್ಣಮೂರ್ತಿ, ನಂದೀಶ್, ಪ್ರತಾಪ್‌ಕುಮಾರ್, ಶಂಕರ ನಾಯಕ, ಶಿವಮೂರ್ತಿ, ಮಹೇಂದ್ರ, ಚನ್ನಬಸಮ್ಮ, ಶಾಂತಮ್ಮ, ಗೌರಮ್ಮ, ನಾಗಮ್ಮ, ಮಹದೇವಸ್ವಾಮಿ, ಶಿವಣ್ಣ, ವೆಂಕಟಯ್ಯ, ಸೋಮಶೇಖರ್, ಕೆಇಬಿ ಮಹೇಶ್, ಬಸವರಾಜು, ಆನಂದ್, ಕಿರಣ್, ಅಶೋಕ್ ಕುಮಾರ್, ಮಂಜುನಾಥ್, ನಂಜುಂಡಸ್ವಾಮಿ, ನಾಗರಾಜು, ಸಿದ್ದಯ್ಯ ಸೇರಿದಂತೆ ಹಲವರಿದ್ದರು.