ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಸಂಚಾರ ತಡೆದ ಪ್ರತಿಭಟನೆ ನಡೆಸಲಾಯಿತು.
- ತಮಿಳುನಾಡು ಒಲೈಕೆಗೆ ನೀರು ಬಿಟ್ಟರೆ ರೈತರೆಲ್ಲರೂ ಸೇರಿ ಪಾಠ ಕಲಿಸಬೇಕಾಗುತ್ತದೆ
- ನೀರು ಬಿಡುವಂತೆ ಹೇಳಿರುವ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನೇ ರದ್ದು ಮಾಡಬೇಕು
ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ನಗರದ ಕಾಡಾ ಕಚೇರಿ ಮುಂಭಾಗ ರಸ್ತೆ ಸಂಚಾರ ತಡೆ ನಡೆಸಿ ಯಾವುದೇ ಕಾರಣಕ್ಕೂ ಕಾವೇರಿ ನೀರು ಬಿಡುಗಡೆ ಮಾಡದಂತೆ ಆಗ್ರಹಿಸಿದರು.
ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಡಿ.ಕೆ.ಶಿವಕುಮಾರ್ ತಮಿಳುನಾಡು ಒಲೈಕೆಗೆ ನೀರು ಬಿಟ್ಟರೆ ರೈತರೆಲ್ಲರೂ ಸೇರಿ ಪಾಠ ಕಲಿಸಬೇಕಾಗುತ್ತದೆ. ರಾಜ್ಯದಲ್ಲಿ ಈಗ ಬರ ಪರಿಸ್ಥಿತಿ ಇದ್ದು, ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿ, ಸಚಿವರು, ಶಾಸಕರು ಬರ ಅಧ್ಯಯನ ಅವಲೋಕಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಮಾದಾಪುರ ಕೆಂಪರಾಜ್, ಮೋಹನ್, ರಾಜೇಶ್, ದೇವಿರಮ್ಮನಹಳ್ಳಿ ಹುಂಡಿ ರೇವಣ್ಣ, ಹೊನ್ನೇಗೌಡನಹಳ್ಳಿ ಮಹೇಶ್, ಕೀಲಿಪುರ ಶ್ರೀಕಂಠ, ಊರ್ದಳ್ಳಿ ರಾಮಣ್ಣ ಇತರರು ಇದ್ದರು.
ರಾಜ್ಯ ರೈತ ಸಂಘದಿಂದ ತಮಿಳುನಾಡಿಗೆ ನೀರು ಬಿಡಲು ಆದೇಶ ಮಾಡಿರುವ ಸಿಡಬ್ಲುೃಸಿ ನೀತಿಯನ್ನು ಖಂಡಿಸಿ ಮೈಸೂರಿನ ನ್ಯಾಯಾಲಯದ ಮುಂದೆ ಅಧ್ಯಕ್ಷ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಸಾಂಕೇತಿಕವಾಗಿ ಧರಣಿ ನಡೆಸಿ ಮನವಿ ಸಲ್ಲಿಸಲಾಯಿತು.
ಬಡಗಲಪುರ ನಾಗೇಂದ್ರ ಮಾತನಾಡಿ, ಸಿಡಬ್ಲುೃಆರ್‌ಸಿ ಆದೇಶ ಅವೈಜ್ಞಾನಿಕವಾಗಿದೆ. ರಾಜ್ಯದಲ್ಲಿ ಬರಗಾಲದಿಂದ ಜನ ತತ್ತರಿಸಿದ್ದಾರೆ. ಹಾರಂಗಿ ಹೊರತುಪಡಿಸಿ ಕಾವೇರಿ ಜಲಾಯನದ ಅಣೆಕಟ್ಟೆಗಳಲ್ಲಿ ನೀರಿನ ಸಂಗ್ರಹಣೆ ತೀರಾ ಕಡಿಮೆ ಇದೆ. ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗಿದೆ. ನಮ್ಮ ರೈತರ ಬೆಳೆಗಳು ಒಣಗುತ್ತಿವೆ. ಕೆರೆ-ಕಟ್ಟೆಗಳು ಬತ್ತಿಹೋಗಿವೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವೇ ಇಲ್ಲ ಎಂದರು.
ಜಿಲ್ಲಾ ಅಧ್ಯಕ್ಷ ಹೊಸೂರ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಪಿ.ಮರಂಕಯ್ಯ, ಉಗ್ರನರಸಿಂಹೇಗೌಡ ಇತರರು ಭಾಗವಹಿಸಿದ್ದರು.
ತಮಿಳುನಾಡಿಗೆ ನೀರು ಹರಿಸಬೇಕೆಂದು ಶಿಫಾರಸು ಮಾಡಿರುವ ಕಾವೇರಿ ನೀರು ನಿಯಂತ್ರಣ ಮಂಡಳಿ ಆದೇಶವನ್ನು ಖಂಡಿಸಿ ಮೈಸೂರಿನ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಕರ್ನಾಟಕ ಸೇನಾಪಡೆಯಿಂದ ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ಧ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ಸೇನಾಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ ಮಾತನಾಡಿ, ನಮಗೆ ಕುಡಿಯಲೇ ನೀರಿಲ್ಲ. ಇಂತಹ ಸಮಯದಲ್ಲಿ ವಿವೇಚನೆ ಇಲ್ಲದೆ ನೀರು ಬಿಡುವಂತೆ ಹೇಳಿರುವ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನೇ ರದ್ದು ಮಾಡಬೇಕು. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಒಂದು ಹನಿ ನೀರೂ ಬಿಡಬಾರದು ಎಂದು ಒತ್ತಾಯಿಸಿದರು.
ಪ್ರಭುಶಂಕರ್, ಗೋಲ್ಡನ್ ಸುರೇಶ್, ಸಿದ್ದೇಗೌಡ, ಗಿರೀಶ್, ಸೋಮೇಗೌಡ, ಸಿಂಧುವಳ್ಳಿ ಶಿವಕುಮಾರ್, ರಾಧಾಕೃಷ್ಣ, ಮಂಜುಳಾ, ತಾಯೂರು ಗಣೇಶ್, ಡಾ.ನಾಗೇಂದ್ರ, ಚಂದ್ರಶೇಖರ್, ಸುನೀಲ್, ರಮೇಶ್, ಶಿವಲಿಂಗಯ್ಯ, ಹನುಮಂತಯ್ಯ, ನಾರಾಯಣಗೌಡ, ಶಿವರಾಂ, ಮಲ್ಲೇಶ್, ಹೊನ್ನೇಗೌಡ, ವಿಜಯೇಂದ್ರ ಮತ್ತಿತರರು ಪಾಲ್ಗೊಂಡಿದ್ದರು.