ಎಚ್.ಡಿ.ಕೋಟೆ ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಎಸ್‌ಐಆರ್ ಪ್ರಕ್ರಿಯೆ ರದ್ದುಗೊಳಿಸುವಂತೆ ಒತ್ತಾಯಿಸಿ ತಾಲೂಕು ಸಂವಿಧಾನ ಸಂರಕ್ಷಣಾ ಪಡೆ ಮತ್ತು ಎಲ್ಲ ಜನಾಂಗ, ಧರ್ಮದ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು. 
ಮೈಸೂರು

ಎಸ್‌ಐಆರ್ ವಿರೋಧಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಎಚ್.ಡಿ.ಕೋಟೆ: ಎಸ್‌ಐಆರ್ ಪ್ರಕ್ರಿಯೆ ರದ್ದುಗೊಳಿಸುವಂತೆ ಒತ್ತಾಯಿಸಿ ತಾಲೂಕು ಸಂವಿಧಾನ ಸಂರಕ್ಷಣಾ ಪಡೆ ಮತ್ತು ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಶನಿವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಸೇರಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷ ರಾಜಕೀಯ ಷಡ್ಯಂತ್ರದಿಂದ ಮತದಾರರ ಪಟ್ಟಿ(ಎಸ್‌ಐಆರ್) ಪರಿಷ್ಕರಣೆ ನೆಪದಲ್ಲಿ ಕೆಲವರ ಹಕ್ಕುಗಳನ್ನು ಕಸಿದು, ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.
ಎಸ್‌ಐಆರ್ ಎಂಬುದು ಸಂವಿಧಾನ ವಿರೋಧಿ, ಪ್ರಜಾತಂತ್ರಕ್ಕೆ ಮಾರಕವಾದ, ಪ್ರತಿಯೊಬ್ಬ ಪ್ರಜೆಯನ್ನು ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸುವ, ದುರುದ್ದೇಶಪೂರಿತ ಪ್ರಕ್ರಿಯೆಯಾಗಿದೆ. ಇದು ಈ ದೇಶದಲ್ಲಿ ಮತದಾನದ ಹಕ್ಕಿಲ್ಲದ ಎರಡನೇ ದರ್ಜೆಯ ಪ್ರಜೆಗಳನ್ನು ಸೃಷ್ಟಿಸುವ ಪ್ರಕ್ರಿಯೆಯ ಪ್ರಾರಂಭವಾಗಿದೆ ಎಂದು ದೂರಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಏಜಾಜ್ ಪಾಷ, ಪ್ರಗತಿಪರ ಮುಖಂಡರಾದ ಅಕ್ಬರ್ ಪಾಷ, ಚಾ.ನಂಜುಂಡಮೂರ್ತಿ, ಮುದ್ದುಮಲ್ಲಯ್ಯ, ಸ್ಟುಡಿಯೋ ಪ್ರಕಾಶ್, ವಕೀಲ ಶಿವರಾಜ್ ಮಾತನಾಡಿ ಎಸ್‌ಐಆರ್ ಪ್ರಕ್ರಿಯೆಯಿಂದ ಹೊರ ಹಾಕಿದವರಿಗೆ ಯಾವ ಸರ್ಕಾರಿ ಸೌಲಭ್ಯಗಳೂ ದೊರಕುವುದಿಲ್ಲ ಎಂದು ಬಿಜೆಪಿ ಆಡಳಿತರೂಢ ರಾಜ್ಯಗಳ ಮುಖ್ಯಮಂತ್ರಿಗಳು ಘೋಷಿಸುತ್ತಿದ್ದಾರೆ. ಎಸ್‌ಐಆರ್ ನಡೆದ ರಾಜ್ಯಗಳಲ್ಲಿ ಇದುವರೆಗೆ 6.5 ಕೋಟಿ ಮತದಾರರನ್ನು ಮತ ಪಟ್ಟಿಯಿಂದ ತೆಗೆಯಲಾಗಿದೆ ಎಂಬ ಮಾಹಿತಿ ನೀಡಿದರು.
ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಕನಿಷ್ಠ ಅರ್ಹ ಮತದಾರರು ಇದ್ದಾರೆ ಎಂಬುದು ಅನೇಕ ಅಧ್ಯಯನಗಳು ನಿರೂಪಿಸಿವೆ. ಪಶ್ಚಿಮ ಬಂಗಾಳದಲ್ಲಿ ದಾಖಲೆಗಳಿದ್ದರೂ 27 ಲಕ್ಷ ಜನರಿಗೆ ಮತದಾನದ ಹಕ್ಕನ್ನು ನಿರಾಕರಿಸಿದ್ದು ಅಕ್ಷಮ್ಯ ಅಪರಾಧ. ಅದರ ಹಿಂದಿನ ರಾಜಕೀಯ ದುರುದ್ದೇಶ ನ್ಯಾಯಾಂಗಕ್ಕೆ ಕಾಣದಿದ್ದರೂ ಇಡೀ ದೇಶದ ಜನರ ಕಣ್ಣಿಗೆ ನಿಚ್ಚಳವಾಗಿ ಗೋಚರಿಸಿದೆ ಎಂದರು.
ನಾವು ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯ ಪರವಾಗಿ ಇದ್ದೇವೆ. ಆದರೆ, ಎಸ್‌ಐಆರ್ ಹೆಸರಲ್ಲಿ ಬರುತ್ತಿರುವ ಈ ದುಷ್ಟ ಹಾಗೂ ದೋಷ ಪೂರಿತ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಆಕ್ರೋಶ ಹೊರ ಹಾಕಿ, ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಚಾಮರಾಜು, ಮನುಗನಹಳ್ಳಿ ಮಾದಪ್ಪ, ಚೆನ್ನೀಪುರ ಚೆಲುವರಾಜು, ಮಂಜು ಹೊಸಮಾಳ, ಶಿವಣ್ಣ ಸರಗೂರು, ಚೆನ್ನೀಪುರ ಮಲ್ಲೇಶ್, ಕಂದೇಗಾಲ ಶಿವರಾಜು, ಕೆಂಡಗಣಸ್ವಾಮಿ, ಹೈರಿಗೆ ಶಿವರಾಜು, ಕ್ರಾಂತಿ ಕುಮಾರ್, ಮಹೇಶ್ ಚೆಲುವರಾಜ್, ಜೀವಿಕ ಬಸವರಾಜು, ಸದಾಶಿವಕೋಟೆ ಕೆಂಪಶೆಟ್ಟಿ, ಶೈಲಾ ಸುಧಾಮಣಿ, ಶಿವಪ್ಪಶೆಟ್ಟಿ, ಎಚ್.ಬಿ ಚೆಲುವರಾಜು, ಗಣೇಶ್ ಪುಟ್ಟಮಾದು, ರಹಮದ್ ಖಾನ್, ಟಿ.ಎಲ್.ಸ್ವಾಮಿ ಮುಂತಾದವರು ಭಾಗವಹಿಸಿದ್ದರು.