ಹುಣಸೂರು ನಗರದ ಸಂವಿಧಾನ ವೃತ್ತದಲ್ಲಿ ಪರಿಶಿಷ್ಟ ಜಾತಿ ಬಲಗೈ ಸಮುದಾಯದ ಮುಖಂಡರು ವಿವಿಧ ಬೇಡಿಕೆಗಳ ಈಡೇರಿಕೆಗ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಹರಿಹರ ಆನಂದಸ್ವಾಮಿ, ದೇವರಾಜ ಒಡೆಯರ್, ದೊಡ್ಡಹೆಜ್ಜೂರು ನಾಗೇಶ್, ಸಂತೋಷ್ ಇತರರಿದ್ದರು. 
ಮೈಸೂರು

ಬಲಗೈ ಸಮುದಾಯಗಳ ಪ್ರತಿಭಟನೆ

ಶಿವಶಂಕರ್ ಎಂ. ಹೆಬ್ಬಳ್ಳ
ಹುಣಸೂರು : ರಾಜ್ಯ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಒಳಮೀಸಲಾತಿ ನಿಯಮದಲ್ಲಿ ಪರಿಶಿಷ್ಟಜಾತಿಯ ಬಲಗೈ(ಹೊಲೆಯ)ಸಮುದಾಯಕ್ಕೆ ಅನ್ಯಾಯವಾಗಿದ್ದು, ಸಮಸ್ಯೆ ಬಗೆಹರಿಯುವವರೆಗೆ ರಾಜ್ಯದ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಒಳ ಮೀಸಲಾತಿ ಕಾರ್ಯಚಟುವಟಿಕೆಗಳಿಗೆ ತಡೆ ನೀಡಬೇಕೆಂದು ಆಗ್ರಹಿಸಿ ತಾಲೂಕು ಬಲಗೈ(ಹೊಲೆಯ)ಸಮುದಾಯಗಳ ಒಕ್ಕೂಟ ಪ್ರತಿಭಟನೆ ನಡೆಸಿದರು.
ನಗರದ ಎಪಿಎಂಸಿ ವೃತ್ತದಿಂದ ಅರಸು ಪುತ್ಥಳಿ, ಆಂಜನೇಯಸ್ವಾಮಿ ದೇವಾಲಯದ ಮೂಲಕ ಸಂವಿಧಾನ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ನ್ಯಾಯಮೂರ್ತಿ ಡಾ.ಎಚ್.ಎನ್.ನಾಗಮೋಹನದಾಸ್ ಸಿದ್ಧಪಡಿಸಿರುವ ಸಮೀಕ್ಷೆಯ ವರದಿ ಅವೈಜ್ಞಾನಿಕವಾಗಿದ್ದು, ಪರಿಶಿಷ್ಟ ಜಾತಿಯ ಬಲಗೈ ವರ್ಗದ 19 ಜಾತಿಗಳು ಮತ್ತು ಆದಿ ಆಂಧ್ರ, ಆದಿದ್ರಾವಿಡ, ಆದಿ ಕರ್ನಾಟಕ ಮತ್ತು ಛಲವಾದಿ ಜನರಿಗೆ ಅನ್ಯಾಯವಾಗುತ್ತಿದೆ. ರಾಜ್ಯಪಾಲರು ಕಾಯ್ದೆಗೆ ಅಂಕಿತ ಹಾಕಿದ್ದು, ರಾಜ್ಯಸರ್ಕಾರ ಕೂಡಲೇ ಕಾಯ್ದೆಯನ್ನು ಹಿಂಪಡೆಯಬೆಕು. ಸಮಸ್ಯೆಗಳು ಬಗೆಹರಿಯುವ ತನಕ ಯಾವುದೇ ಸಂಸ್ಥೆ ಮತ್ತು ಇಲಾಖೆಗಳಿಂದ ಶೈಕ್ಷಣಿಕ ಮತ್ತು ಔದ್ಯೋಗಿಕ ಪ್ರಕ್ರಿಯೆಗಳು ನಡೆಯದಂತೆ ಆದೇಶಿಸಬೇಕು. ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರಗಳಲ್ಲಿ ಈ ಹಿಂದಿನ ರೋಸ್ಟರ್ ಪದ್ಧತಿಯನ್ನು ಅನುಸರಿಸುವ ಮೂಲಕ ಸಾಮಾಜಿಕ ನ್ಯಾಯ, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಹರಿಹರ ಆನಂದಸ್ವಾಮಿ, ಸೋಮನಹಳ್ಳಿ ಶಿವಶಂಕರ್, ನಿಂಗರಾಜ ಮಲ್ಲಾಡಿ, ದೇವರಾಜ್ ಒಡೆಯರ್, ನಗರಸಭೆ ಮಾಜಿ ಸದಸ್ಯ ರಮೇಶ್ ದೊಡ್ಡಹೆಜ್ಜೂರು, ಸಹಾಯಕ ಪ್ರಾಧ್ಯಾಪಕ ಪ್ರತಾಪ್, ಸಂಶೋಧನಾ ವಿದ್ಯಾರ್ಥಿಗಳಾದ ನಂದೀಶ್, ಲಿಂಗರಾಜು ಮಾತನಾಡಿದರು. ಮುಖಂಡರಾದ ಕಟ್ಟೆಮಳಲವಾಡಿ ದೇವರಾಜ್, ಎಚ್.ಕೆ.ಗೋವಿಂದರಾಜ್, ತರೀಕಲ್ ರಾಜು, ಬಿಳಿಕೆರೆ ಸ್ವಾಮಿ, ದೊಡ್ಡಹೆಜ್ಜೂರು ನಾಗೇಶ್, ರಾಜಪ್ಪ, ಸಂತೋಷ್ ಇತರರು ಹಾಜರಿದ್ದರು. ಉಪವಿಭಾಗಾಧಿಕಾರಿ ಕಚೇರಿ ತಹಸೀಲ್ದಾರ್ ಯದುಗಿರೀಶ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.