ಪತ್ರ ಬರಹಗಾರರ ಒಕ್ಕೂಟದ ಬೇಡಿಕೆಯನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ತಾಲೂಕು ಕಚೇರಿ ಮುಂಭಾಗ ದಸ್ತಾವೇಜು ಬರಹಗಾರರ ಸಂಘದಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು. 
ಮೈಸೂರು

ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ

ನಾಗೇಶ ಎಸ್
ನಂಜನಗೂಡು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ನಗರದಲ್ಲಿ ತಾಲೂಕು ದಸ್ತಾವೇಜು ಬರಹಗಾರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಜಮಾವಣೆಗೊಂಡ ಬರಹಗಾರರ ಸಂಘದ ಸದಸ್ಯರು, ಸರ್ಕಾರದ ನಿಯಮವನ್ನು ಖಂಡಿಸಿದರು. ಸಂಘದ ಅಧ್ಯಕ್ಷ ಪ್ರಕಾಶ್ ರಾಜೇ ಮಾತನಾಡಿ, ಕಾವೇರಿ-1 ತಂತ್ರಾಂಶದ ಮುಖಾಂತರ ಸರ್ಕಾರ ಕಂಪ್ಯೂಟರೀಕರಣವನ್ನು ಜಾರಿಗೆ ತಂದು ಉಂಟಾಗುತ್ತಿದ್ದ ಸಮಯದ ವಿಳಂಬವನ್ನು ತಪ್ಪಿಸುವಲ್ಲಿ ನೋಂದಣಿ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ ಕಾವೇರಿ-2 ತಂತ್ರಾಂಶ ಜಾರಿಗೆ ತಂದು ಸಂಬಂಧಪಟ್ಟ ಪತ್ರಗಳನ್ನು ಅವರೇ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಸಿಟಿಜನ್ ಲಾಗಿನ್ ಎಂಬ ತಂತ್ರಜ್ಞಾನವನ್ನು ಜಾರಿಗೆ ತಂದಿದ್ದಾರೆ. ಆದರೆ ಈ ತಂತ್ರಾಂಶವನ್ನು ಸಾರ್ವಜನಿಕರು ಉಪಯೋಗಿಸದೆ ಡಿಟಿಪಿ ಸೆಂಟರ್, ಸೈಬರ್ ಸೆಂಟರ್ ಮತ್ತು ಕಂಪ್ಯೂಟರ್ ಸೆಂಟರ್‌ಗಳು ದುರುಪಯೋಗ ಮಾಡಿಕೊಂಡು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದಾರೆ. ಪರವಾನಗಿ ಪಡೆದ ಪತ್ರ ಬರಹಗಾರರ ಕೆಲಸಕ್ಕೆ ಸಮಸ್ಯೆ ಉಂಟಾಗಿದೆ ಎಂದು ದೂರಿದರು.
ಸರ್ಕಾರ ತಂದಿರುವ ಫೇಸ್‌ಲೆಸ್ ಮತ್ತು ಪೇಪರ್‌ಲೆಸ್ ತಂತ್ರಾಂಶದಿಂದ ಬರಹಗಾರರ ವೃತ್ತಿ ಇರುವುದಿಲ್ಲ. ರಾಜ್ಯಾದ್ಯಂತ 16,000 ಪತ್ರ ಬರಹಗಾರರು ಇದ್ದು, ಇವರ ಜತೆಗೆ ಸಹಾಯಕರು ಮತ್ತು ಕಂಪ್ಯೂಟರ್ ಆಪರೇಟರ್‌ಗಳು ಸೇರಿ ಒಂದು ಲಕ್ಷ ಜನ ಇದ್ದಾರೆ. ಇವರ ಕುಟುಂಬಗಳು ಸೇರಿ ಸುಮಾರು 5 ಲಕ್ಷ ಜನ ಬೀದಿ ಪಾಲಾಗುತ್ತಿರುವ ಹಿನ್ನೆಲೆಯಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಈಗಾಗಲೇ ಮನವಿ ಪತ್ರ ಸಲ್ಲಿಸಿದರೂ ಸ್ಪಂದಿಸಿಲ್ಲ. ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್, ಪತ್ರ ಬರಹಗಾರರ ಸಹಿ, ಅಧಿಕೃತ ಗುರುತಿನ ಚೀಟಿ ನೀಡುವಂತೆ ಆಗ್ರಹಿಸಿದರು. ಬಳಿಕ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಗೌರವಾಧ್ಯಕ್ಷ ಎಸ್.ಗುರುರಾಜು, ಉಪಾಧ್ಯಕ್ಷ ಬಸವರಾಜು, ಕಾರ್ಯದರ್ಶಿ ಕುಮಾರಸ್ವಾಮಿ, ಕೃಷ್ಣಪ್ಪ ಗೌಡ, ಬದನವಾಳು ಮಹದೇವಪ್ಪ, ಚೆನ್ನಮಲ್ಲಪ್ಪ, ಶಶಿಧರ, ನಾಗರಾಜು ಅರಸ್ ಸೇರಿದಂತೆ ಸಂಘದ ಸದಸ್ಯರು ಹಾಜರಿದ್ದರು.