ಬೆಣಗಲ್ ಮುಖ್ಯರಸ್ತೆ ಬದಿಯಲ್ಲಿ ಬಲಗೈ ಸಮುದಾಯದ ಸಭೆ ಸೇರಿ ಮಾತನಾಡುತ್ತಿರುವ ಗಣ್ಯರಾದ ಐಲಾಪುರ ರಾಮು, ತಮ್ಮಣ್ಣಯ್ಯ, ವಾಲೆ ಗಿರೀಶ್, ಕಾಂತರಾಜ್, ಹೇಮಂತ್ ಇದ್ದರು. 
ಮೈಸೂರು

25ರಂದು ಬೆಂಗಳೂರಿನಲ್ಲಿ ಪ್ರತಿಭಟನಾ ಸಮಾವೇಶ

ಲೋಕೇಶ್ ಮನು. ಡಿ
ಬೈಲುಕುಪ್ಪೆ: ಒಳಮೀಸಲಾತಿಯಲ್ಲಿ ಹೊಲಯ ಸಂಬಂಧಿಸಿದ ಜಾತಿಗಳಿಗೆ ರೋಸ್ಟರ್ ಬಿಂದುವಿನಲ್ಲಿ ಆಗಿರುವ ಅನ್ಯಾಯ ಸರಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಬಲಗೈ ಸಮುದಾಯದವರು ಮಾ.25ರಂದು ಬೆಂಗಳೂರಿನ ಕಬ್ಬನ್ ಪಾರ್ಕ್ ಆವರಣದಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ಸಮಾವೇಶಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಪಿರಿಯಾಪಟ್ಟಣ ತಾಲೂಕಿನ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಧನರಾಜ್ ಸೋಮವಾರ ಮನವಿ ಮಾಡಿದರು.
ಪಿರಿಯಾಪಟ್ಟಣ ತಾಲೂಕಿನ ಬೆಣಗಾಲು ಗ್ರಾಮದ ಮುಖ್ಯರಸ್ತೆ ಬದಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಬಲಗೈ ಸಮುದಾಯದವರು ಎಲ್ಲರೂ ಒಗ್ಗಟ್ಟಿನಿಂದ ಚೆನ್ನಕಲ್ ಕಾವಲು, ದೊಡ್ಡಹೂನ್ನೂರು, ಚಿಕ್ಕನೇರಳೆ, ದೊಡ್ಡನೇರಳೆ, ಸೂಳೆಕೋಟೆ, ಮರಡಿಯೂರು, ಕೊಪ್ಪ, ಬೈಲುಕುಪ್ಪೆ ಸೇರಿದಂತೆ ತಾಲೂಕಿನಾದ್ಯಂತ ಪ್ರವಾಸ ಮಾಡಿ ಬಲಗೈ ಸಮುದಾಯದವರ ಜತೆ ಚರ್ಚಿಸಿ ಮಾಹಿತಿ ನೀಡಲಾಗಿದೆ. ಗ್ರಾಮದ ಮುಖಂಡರು, ಮಹಿಳೆಯರು ಬೆಂಗಳೂರಿಗೆ ತೆರಳಲು ಈಗಾಗಲೇ ವಾಹನವನ್ನು ಸಹ ನಿಗದಿಪಡಿಸಲಾಗಿದೆ. ಪಿರಿಯಾಪಟ್ಟಣಕ್ಕೆ ಬುಧವಾರ ಮುಂಜಾನೆ 5 ಗಂಟೆಗೆ ಬಂದು ಬೆಂಗಳೂರಿನ ನಡೆಯುವ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ತಾಲೂಕಿನ ದಲಿತ ಮುಖಂಡ ಪಿ.ಮಹದೇವ್ ಮಾತನಾಡಿ, ಈ ಪ್ರತಿಭಟನೆ ಯಾವುದೇ ಜಾತಿ ವಿರುದ್ಧ ಅಲ್ಲ. ಸರ್ಕಾರ ನಿಗದಿಪಡಿಸಿರುವ ಸರ್ಕಾರಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳುವಾಗ ನಿಗದಿಪಡಿಸಿರುವ ರೋಸ್ಟರ್ ಬಿಂದು ಪದ್ಧತಿಯು ಅವೈಜ್ಞಾನಿಕವಾಗಿದೆ ಹಾಗೂ ನೇಮಕಾತಿಯಲ್ಲಿ ಬಲಗೈ ಸಂಬಂಧಿಸಿದಂತೆ ಜಾತಿಗಳಿಗೆ ಯಾವುದೇ ಹುದ್ದೆಗಳು ನೀಡದೆ ಅನ್ಯಾಯವಾಗಿದೆ. ಈ ನಡೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿದೆ. ಆದ್ದರಿಂದ ಈ ಅನ್ಯಾಯವನ್ನು ಸರಿಪಡಿಸುವತನಕ ಯಾವುದೇ ಹೊಸ ನೇಮಕಾತಿ ಮಾಡದಂತೆ ಸರ್ಕಾರ ಹೊಸ ರೋಸ್ಟರ್ ಪದ್ಧತಿ ಜಾರಿಗೆ ತರುವ ಆದೇಶವನ್ನು ಜಾರಿ ಮಾಡಬೇಕೆಂದು ಮನವಿ ಮಾಡಲಾಗುವುದು. ಆದ್ದರಿಂದ ಬಲಗೈ ಸಮುದಾಯದವರು ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು
ತಾಲೂಕಿನ ದಲಿತ ಮುಖಂಡರಾದ ತಮ್ಮಣ್ಣಯ್ಯ, ವಾಲೆ ಗಿರೀಶ್, ಮೇಲೂರು ಕಾಂತರಾಜ್, ದೊಡ್ಡಕಮರವಳ್ಳಿ ಹೇಮಂತ್, ಸೋಮಶೇಖರ, ನವಿಲೂರು ಚೆನ್ನಪ್ಪ, ಬೆಮ್ಮತಿ ಚಂದ್ರು, ಮಹದೇವ, ಸಣ್ಣಪ್ಪ, ಚನ್ನಕಲ್ ಶ್ರೀಕಾಂತ್, ದೊಡ್ಡ ಹಾರ್ವೆ ರಾಜಯ್ಯ, ಸಣ್ಣಯ್ಯ, ಚೆನ್ನಕಲ್ಲು ಶೇಖರ್, ಸೋಮಶೇಖರ್, ತಾತನಹಳ್ಳಿ ಈರಯ್ಯ, ಇರಾಜ್, ರಂಗನಾಥ್ ಇತರರು ಇದ್ದರು.