ಬೆಟ್ಟದಪುರ ಸಮೀಪದ ಹರದೂರು, ಮತ್ತು ಮಂಟಿಬಿಳಗುಲಿ ಸರ್ಕಾರಿ ಶಾಲೆಗಳ ವಿಲೀನ ವಿರೋಧಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಗ್ರಾಮಸ್ಥರು ಮತ್ತು ಪಾಲಕರು ಸೋಮವಾರ ಪ್ರತಿಭಟನೆ ನಡೆಸಿದರು. 
ಮೈಸೂರು

ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಶಾಲೆಗಳ ವಿಲೀನಗೊಳಿಸದಂತೆ ಆಗ್ರಹ
ಬೆಟ್ಟದಪುರ: ಬೆಟ್ಟದಪುರದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಮ್ಯಾಗ್ನೆಟ್ ಶಾಲೆ ಆರಂಭಿಸುವ ಹಿನ್ನೆಲೆಯಲ್ಲಿ ಹರದೂರು, ಮಂಟಿ ಬಿಳಗುಲಿ ಸೇರಿದಂತೆ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳು ವಿಲೀನಗೊಳ್ಳುವ ಸಾಧ್ಯತೆ ಇರುವುದನ್ನು ವಿರೋಧಿಸಿ ಗ್ರಾಮಸ್ಥರು, ಪಾಲಕರು ಹಾಗೂ ವಿದ್ಯಾರ್ಥಿಗಳು ಎಐಡಿಎಸ್‌ಒ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಸದಸ್ಯೆ ಹಾಗೂ ಎಐಡಿಎಸ್‌ಒ ಕಾರ್ಯಕರ್ತೆ ಪೂರ್ಣಿಮಾ ಮಾತನಾಡಿ, ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಬದಲು ಅಗತ್ಯ ಶಿಕ್ಷಕರ ನೇಮಕಾತಿ ಮತ್ತು ಮೂಲ ಸೌಲಭ್ಯ ಒದಗಿಸಿ ಶಾಲೆಗಳನ್ನು ಬಲಪಡಿಸಬೇಕು ಎಂದು ಆಗ್ರಹಿಸಿದರು.
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಉಪಾಧ್ಯಕ್ಷ ಬಸವರಾಜು ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕ್ರಮವನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.
ಹರದೂರು ಗ್ರಾಮದ ಪ್ರೇಮಾ ಮಾತನಾಡಿ, ನಮ್ಮೂರಿನ ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸಿ, ಉತ್ತಮ ಸೌಲಭ್ಯ ಒದಗಿಸಿದರೆ ಮಕ್ಕಳ ದಾಖಲಾತಿ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಸುರೇಶಗೌಡ, ಅಶೋಕ್, ಸಂಜಯ್, ಕೆಂಪಯ್ಯ, ಧರ್ಮಪ್ಪಣ್ಣ, ರಾಜು, ಶಿವಣ್ಣ, ಅಶೋಕ್, ಪ್ರಕಾಶ್, ಬೋರೇಗೌಡ ಸೇರಿದಂತೆ ಗ್ರಾಮಸ್ಥರು, ಪಾಲಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.