ಟೋಲ್‌ಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹಿಸಿ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಮೈಸೂರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. 
ಮೈಸೂರು

ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹಿಸಿ ಮೈಸೂರಿನಲ್ಲಿ ಪ್ರತಿಭಟನೆ

ಮೈಸೂರು: ಜಿಲ್ಲೆಯಲ್ಲಿ ಹೆದ್ದಾರಿ ಹಾಗೂ ಟೋಲ್‌ಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹಿಸಿ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಯಿತು.
ಮೈಸೂರು-ನಂಜನಗೂಡು ಹಾಗೂ ತಿ.ನರಸೀಪುರದ ಟೋಲ್‌ಗಳಲ್ಲಿ ನಾಮಫಲಕವನ್ನು ಕನ್ನಡದಲ್ಲಿ ಬರೆಯದೆ ಆಂಗ್ಲ ಭಾಷೆಯಲ್ಲಿ ಬರೆಯಲಾಗಿದೆ. ಇದರಿಂದ ಕನ್ನಡ ಭಾಷೆ ಅನುಷ್ಠಾನ ಕುಂಠಿತವಾಗುವಂತೆ ಮಾಡಿ ಸರ್ಕಾರದ ಸುತ್ತೋಲೆ ಉಲ್ಲಂಘಿಸಲಾಗಿದೆ. ಇದರ ವಿರುದ್ಧ ಮೈಸೂರು-ನಂಜನಗೂಡು ಟೋಲ್‌ನಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಜಿಲ್ಲಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಕನ್ನಡಿಗರಿಗೆ ಮಾಡುತ್ತಿರುವ ದ್ರೋಹ ಎಂದು ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಚಾ.ಗು.ನಾಗರಾಜ್, ಜಿಲ್ಲಾಧ್ಯಕ್ಷ ಸಂತೋಷ್, ಪ್ರಧಾನ ಕಾರ್ಯದರ್ಶಿ ಗೌತಮ್ ವಿಶ್ವಕರ್ಮ, ಖಜಾಂಚಿ ಅನುರಾಜ್ ಗೌಡ, ಗೌರವಾಧ್ಯಕ್ಷ ಮನುಗೌಡ ಹಾಗೂ ಇತರರು ಪಾಲ್ಗೊಂಡಿದ್ದರು.