ನಗರದಲ್ಲಿ ಮಸಾಜ್ ಪಾರ್ಲರ್, ಸ್ಪಾ ಹಾಗೂ ವೆಲ್‌ನೆಸ್ ಕೇಂದ್ರದ ಹೆಸರಿನಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಪೊಲೀಸರಿಗೆ ಮನವಿ ಸಲ್ಲಿಸಲಾಯಿತು. ಬಿ.ಬಿ. ರಾಜಶೇಖರ್, ನಂಜುಂಡ, ತಾರಾ, ಹರೀಶ್, ಶಶಿಕಲಾ, ಪರ್ವೀನ್ ತಾಜ್ ಇತರರು ಇದ್ದರು.
- ಕೆಲವು ಮಸಾಜ್ ಪಾರ್ಲರ್ ಮತ್ತು ಸ್ಪಾ ಕೇಂದ್ರಗಳಲ್ಲಿ ಅನೈತಿಕ ಚಟುವಟಿಕೆ
- ಸಾಮಾಜಿಕ ಜಾಲತಾಣಗಳಲ್ಲಿ ಪ್ರಲೋಭನಕಾರಿಯಾಗಿ ಯುವಜನರನ್ನು ತಪ್ಪುದಾರಿಗೆ ಸೆಳೆಯುವ ಪ್ರಯತ್ನ
ಮೈಸೂರು:ನಗರದಲ್ಲಿ ಮಸಾಜ್ ಪಾರ್ಲರ್, ಸ್ಪಾ ಹಾಗೂ ವೆಲ್‌ನೆಸ್ ಕೇಂದ್ರದ ಹೆಸರಿನಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ನಗರ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಕೆಲವು ಮಸಾಜ್ ಪಾರ್ಲರ್ ಮತ್ತು ಸ್ಪಾ ಕೇಂದ್ರಗಳಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ದೂರುಗಳು ಕೇಳಿಬರುತ್ತಿವೆ ಎಂದು ದೂರಿದರು.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಲೋಭನಕಾರಿಯಾಗಿ ಯುವಜನರನ್ನು ತಪ್ಪುದಾರಿಗೆ ಸೆಳೆಯುವ ಪ್ರಯತ್ನಗಳು ಹೆಚ್ಚುತ್ತಿವೆ. ಇಂತಹ ಚಟುವಟಿಕೆಗಳು ಮೈಸೂರು ನಗರದ ಸಾಂಸ್ಕೃತಿಕ ಪರಂಪರೆ, ಐತಿಹಾಸಿಕ ಘನತೆ ಹಾಗೂ ನೈತಿಕ ಮೌಲ್ಯಗಳಿಗೆ ಧಕ್ಕೆ ತರುವುದರ ಜತೆಗೆ ಸಾರ್ವಜನಿಕ ಶಾಂತಿ ಮತ್ತು ಕುಟುಂಬ ಸ್ನೇಹಿ ವಾತಾವರಣದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿದರು.
ನಗರದ ಎಲ್ಲ ಮಸಾಜ್ ಪಾರ್ಲರ್ ಹಾಗೂ ಸ್ಪಾ ಕೇಂದ್ರಗಳ ಮೇಲೆ ವಿಶೇಷ ತಪಾಸಣೆ ನಡೆಸಬೇಕು, ಪರವಾನಗಿ ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಅನೈತಿಕ ಚಟುವಟಿಕೆಗಳು ಪತ್ತೆಯಾದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರವಾಗುತ್ತಿರುವ ಪ್ರಲೋಭನಕಾರಿ ಸೆಳೆಯುವವರ ಕುರಿತು ಸೈಬರ್ ವಿಭಾಗದಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಯಿತು.
ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಬಿ. ರಾಜಶೇಖರ್, ಖಜಾಂಚಿ ನಂಜುಂಡ, ಮಹಿಳಾ ಘಟಕದ ಅಧ್ಯಕ್ಷೆ ತಾರಾ, ಸಂಘಟನಾ ಕಾರ್ಯದರ್ಶಿ ಹರೀಶ್, ಕಾರ್ಯಕರ್ತರಾದ ಶಶಿಕಲಾ, ಪರ್ವೀನ್ ತಾಜ್ ಇತರರು ಇದ್ದರು.