ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕದ ದಾಳಿ ಖಂಡಿಸಿ ಎಸ್‌ಯುಸಿಐನಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಬಿ.ರವಿ, ಮುಖಂಡ ಉಗ್ರ ನರಸಿಂಹೇಗೌಡ, ಸಮಿತಿ ಸದಸ್ಯರಾದ ಎಂ.ಉಮಾದೇವಿ, ಚಂದ್ರಶೇಖರ ಮೇಟಿ, ಪಿ.ಎಸ್.ಸಂಧ್ಯಾ, ಜಿ.ಎಸ್.ಸೀಮಾ, ಟಿ.ಆರ್.ಸುನಿಲ್, ಸುಭಾಷ್, ಬಸವರಾಜು, ಸುಮಾ ಇತರರು ಇದ್ದರು. 
ಮೈಸೂರು

ಇರಾನ್ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ ಮೈಸೂರಿನಲ್ಲಿ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಯುದ್ಧದಿಂದ ಅನಾಹುತವಾಗುವುದನ್ನು ತಪ್ಪಿಸಲು ಮುಂದಾಗಬೇಕು
  • ಈಗಾಗಲೇ ಮಕ್ಕಳೂ ಸೇರಿದಂತೆ ನೂರಾರು ಮಂದಿ ಸಾವನ್ನಪ್ಪಿದ್ದಾರೆ
ಮೈಸೂರು:ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕದ ದಾಳಿ ಖಂಡಿಸಿ ಸೋಷಿಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಎಸ್‌ಯುಸಿಐ-ಕಮ್ಯುನಿಸ್ಟ್) ಸಂಘಟನೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಪುರಭವನದ ಮುಂಭಾಗ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಯುದ್ಧದಿಂದ ಅನಾಹುತವಾಗುವುದನ್ನು ತಪ್ಪಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಯುದ್ಧದಿಂದ ಈಗಾಗಲೇ ಮಕ್ಕಳೂ ಸೇರಿದಂತೆ ನೂರಾರು ಮಂದಿ ಸಾವನ್ನಪ್ಪಿದ್ದಾರೆ. ಶಾಲಾ ಮಕ್ಕಳು, ನಾಗರಿಕರ ಮೇಲೆ ದಾಳಿ ಬೇಡ, ಯುದ್ಧ ಬೇಡ ಶಾಂತಿ ಬೇಕು, ಇರಾನ್ ಮೇಲೆ ಇಸ್ರೇಲ್-ಅಮೆರಿಕ ಸಾಮ್ರಾಜ್ಯಶಾಹಿ ದುಷ್ಟಕೂಟದ ಆಕ್ರಮಣ ನಿಲ್ಲಲಿ ಎಂದು ಘೋಷಣೆ ಕೂಗಿದರು.
ಇರಾನ್ ದೇಶದ ಸರ್ವೋಚ್ಚ ನಾಯಕ ಖಮೇನಿ ಮತ್ತು ಕುಟುಂಬಸ್ಥರನ್ನು ಹತ್ಯೆ ಮಾಡಲಾಗಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ದುಬೈ, ಇಸ್ರೇಲ್, ಯುಎಇಗಳ ಮೇಲೆ ನಡೆಸಿದ ದಾಳಿಯಲ್ಲಿ ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಈ ಅರಬ್ ದೇಶಗಳಲ್ಲಿರುವ ಲಕ್ಷಾಂತರ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಯುದ್ಧದಿಂದ ಅಮಾಯಕರ ಪ್ರಾಣ ಹೋಗುತ್ತಿದೆಯೇ ಹೊರತು ಯಾವುದೇ ಲಾಭವಿಲ್ಲ ಎಂದು ಕಿಡಿಕಾರಿದರು.
ಇರಾನ್ ಪರಮಾಣು ಯೋಜನೆಗೆ ಸಂಬಂಧಿಸಿ ತಾನು ಹೇಳಿದ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಇದರಿಂದ ಜಗತ್ತಿಗೇ ಅಪಾಯವಿದೆ. ತನ್ನ ಮಾತು ಕೇಳದ ಇರಾನ್ ಸರ್ಕಾರ ಬದಲಾಯಿಸಲು ಈ ಯುದ್ಧ ಎಂದು ಅಮೆರಿಕದ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಕೆಲವೇ ಕೆಲವು ಸಾಮ್ರಾಜ್ಯಶಾಹಿ ದೇಶಗಳು ಪರಮಾಣು ಬಾಂಬುಗಳನ್ನು ಇಟ್ಟುಕೊಂಡು ಬೇರೆ ದುರ್ಬಲ ದೇಶಗಳ ಮೇಲೆ ದಬ್ಬಾಳಿಕೆ ನಡೆಸುತ್ತಿವೆ. ವಿಶ್ವಸಂಸ್ಥೆ ಕೂಡ ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮೆರಿಕದ ಮಿತ್ರ ರಾಷ್ಟ್ರ ಇಸ್ರೇಲ್ ಪರಮಾಣು ಬಾಂಬ್ ಹೊಂದಿದ್ದು, ತನ್ನ ಸುತ್ತಲಿನ ಪ್ರತಿಯೊಂದು ದೇಶದ ಮೇಲೂ ಆಕ್ರಮಣ ನಡೆಸಿದೆ. ಆರಬ್ ಪ್ರದೇಶದ ತೈಲ ಸಂಪನ್ಮೂಲದ ಮೇಲೆ ಕಣ್ಣಿಟ್ಟಿರುವ ಅಮೆರಿಕ, ಅಲ್ಲಿನ ರಾಜಕೀಯ, ಆರ್ಥಿಕತೆಯ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸುತ್ತಲೇ ಇದೆ. ಸೌದಿ ಅರೇಬಿಯಾ, ಯುಎಇ, ಕುವೈತ್, ಕತಾರ್ ಮೊದಲಾದ ದೇಶಗಳಲ್ಲಿ ಅಮೆರಿಕಾದ ಸೇನಾ ನೆಲೆಗಳಿವೆ. ಆದರೆ ಇರಾನ್ ಅಮೆರಿಕದ ಸಾಮ್ರಾಜ್ಯಶಾಹಿ ದಬ್ಬಾಳಿಕೆಗೆ ತಲೆ ಬಾಗುತ್ತಿಲ್ಲ ಎಂದು ದೂರಿದರು.
ಇಂದು ಸಾಮ್ರಾಜ್ಯಶಾಹಿ ಅಮೆರಿಕ ಇಡೀ ಜಗತ್ತಿನ ಶಾಂತಿಗೆ ಅತಿದೊಡ್ಡ ಕಂಟಕ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯದರ್ಶಿ ಬಿ.ರವಿ, ಮುಖಂಡ ಉಗ್ರ ನರಸಿಂಹೇಗೌಡ, ಸಮಿತಿ ಸದಸ್ಯರಾದ ಎಂ.ಉಮಾದೇವಿ, ಚಂದ್ರಶೇಖರ ಮೇಟಿ, ಪಿ.ಎಸ್.ಸಂಧ್ಯಾ, ಜಿ.ಎಸ್.ಸೀಮಾ, ಟಿ.ಆರ್.ಸುನಿಲ್, ಸುಭಾಷ್, ಬಸವರಾಜು, ಸುಮಾ, ಚಂದ್ರಕಲಾ, ಆಸಿಯಾ ಬೇಗಂ, ನೀತುಶ್ರೀ ಇತರರು ಇದ್ದರು.