tomorrow 
ಮೈಸೂರು

ಡಿಸಿ ಕಚೇರಿ ಎದುರು ನಾಳೆ ಪ್ರತಿಭಟನೆ

ಅವಿನಾಶ್ ಜೈನಹಳ್ಳಿ
ಒಳಮೀಸಲಾತಿ ಇಲ್ಲದೆ ರಾಜ್ಯ ಸರ್ಕಾರ 56,432 ಹುದ್ದೆಗಳಿಗೆ ನೇಮಕ ಮಾಡಲು ಹೊರಡಿಸಿರುವ ಆದೇಶ ವಿರೋಧಿಸಿ ಮಾರ್ಚ್ 25 ರಂದು ಬೆಳಗ್ಗೆ 11ಕ್ಕೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಾಗೂ ಬೆಂಗಳೂರಿನ ಮೌರ್ಯ ಸರ್ಕಲ್‌ನಿಂದ ಸಿಎಂ ನಿವಾಸದವರೆಗೆ ಬೃಹತ್ ಪ್ರತಿಭಟನಾ ರ‌್ಯಾಲಿಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಮಿತಿಯ ಜಿಲ್ಲಾಧ್ಯಕ್ಷ ಶಂಕರ್ ತಿಳಿಸಿದರು.
ಸರ್ಕಾರದ ಈ ನಡೆ ಮಾದಿಗ ಹಾಗೂ ಉಪ ಜಾತಿಗಳ ವಿರೋಧಿ ಕ್ರಮವಾಗಿದೆ. ಪರಿಶಿಷ್ಟ ಜಾತಿಗಳ ಮೀಸಲಾತಿ 101 ಜಾತಿಗಳ ನಡುವೆ ಸಮಾನವಾಗಿ ಹಂಚಿಕೆ ಆಗಿಲ್ಲ ಎಂದು ಕಳೆದ 35 ವರ್ಷಗಳಿಂದ ರಾಜ್ಯಾದ್ಯಂತ ನಿರಂತರ ಹೋರಾಟ ನಡೆಸಲಾಗಿದೆ. ಅಲ್ಲದೆ, 2024 ರ ಆ.1 ರಂದು ಸುಪ್ರೀಂಕೋರ್ಟ್ ಪ.ಜಾತಿ ವರ್ಗೀಕರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಐತಿಹಾಸಿಕ ತೀರ್ಪು ನೀಡಿದೆ. ಹಾಗಾಗಿ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗ ರಚಿಸಿ ವರದಿ ಪಡೆದ ಬಳಿಕ ಸಚಿವ ಸಂಪುಟ ಅನುಮೋದಿಸಿತ್ತು. ನಂತರ ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ ಮಸೂದೆ ಅಂಗೀಕರಿಸಿ ರಾಜ್ಯಪಾಲರ ಸಹಿ ನಂತರ ವಿಧೇಯಕ ಅಧಿಕೃತಗೊಂಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆದರೆ ಇದೆಲ್ಲವನ್ನೂ ಸರ್ಕಾರ ಬದಿಗೊತ್ತಿ ಒಳಮೀಸಲಾತಿ ಅಳವಡಿಸದೆ ಹಳೇ ರೋಸ್ಟರ್ ವಿಧಾನದಂತೆ ಈಗ ನೇಮಕ ಮಾಡಿಕೊಳ್ಳಲು ಹೊರಟಿರುವುದು ಸರಿಯಲ್ಲ. ಇದು ಕಾನೂನುಬಾಹಿರ ಹಾಗೂ ಅವೈಜ್ಞಾನಿಕವಾಗಿದೆ. ಇದು ಬಡತನದಲ್ಲಿಯೇ ಜೀವನ ನಡೆಸುತ್ತಿರುವ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳಿಗೆ ಮರಣ ಶಾಸನವಾಗಿದೆ ಎಂದರು.
ಮುಖಂಡರಾದ ಸಿ.ನಾಗರಾಜ್, ಸ್ವಾಮಿ ತಿಲಕ್‌ನಗರ, ಗಂಗಪ್ಪ, ರಾಜಣ್ಣ, ರಾಜಣ್ಣ ಮೈಸೂರು ಇದ್ದರು.