ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅವರನ್ನು ವಜಾಗೊಳಿಸಲು ಆಗ್ರಹಿಸಿ ಬುಧವಾರ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. 
ಮೈಸೂರು

ಮುಕ್ತ ವಿವಿ ಕುಲಪತಿ ವಜಾಕ್ಕೆ ಆಗ್ರಹಿಸಿ ಪ್ರತಿಭಟನೆ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಅವರನ್ನು ವಜಾಗೊಳಿಸಲು ಆಗ್ರಹಿಸಿ ಬುಧವಾರ ಸಂಶೋಧಕರ ಸಂಘ, ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಮುಖಂಡರು ವಿವಿಯ ಆಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.
ಕುಲಪತಿ ಆರ್‌ಎಸ್‌ಎಸ್ ಕೈಗೊಂಬೆಯಾಗಿ ವರ್ತಿಸುತ್ತಿದ್ದು, ಶೈಕ್ಷಣಿಕ ವಾತಾವರಣದಲ್ಲಿ ಕೇಸರಿಕರಣ ಮಾಡುತ್ತಿದ್ದಾರೆ. ಸಂಘ ಪರಿವಾರದ ಸಂಘಟನೆಗೆ ಕಾರ್ಯಕ್ರಮಕ್ಕೆ ಅವಕಾಶ ನೀಡಿ ಜೀವ ವಿರೋಧಿ ಸಿದ್ಧಾಂತಗಳ ಪ್ರಚಾರಕ್ಕೆ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಾರೆ. ವಿವಿಯಲ್ಲಿ ಹಲವು ಭ್ರಷ್ಟಾಚಾರಗಳು ನಡೆಯುತ್ತಿದೆ. ವಿವಿಯ ಎಲ್ಲ ಬೆಳವಣಿಗೆಗಳ ಬಗ್ಗೆ ಸಮಗ್ರವಾಗಿ ತನಿಖೆ ಮಾಡಬೇಕು. 15 ದಿನಗಳ ಒಳಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ವಿವಿಯ ಆಡಳಿತ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ದಸಂಸ ಮುಖಂಡ ಹರಿಹರ ಆನಂದಸ್ವಾಮಿ ಎಚ್ಚರಿಸಿದರು.
ದಸಂಸ ಸಂಚಾಲಕ ಚರೋನಹಳ್ಳಿ ಶಿವಣ್ಣ, ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ, ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ದ್ಯಾವಪ್ಪ ನಾಯಕ, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ನಟರಾಜ್ ಶಿವಣ್ಣ, ಸಂಶೋಧಕರ ಸಂಘದ ಗೌರವಾಧ್ಯಕ್ಷ ಕಲ್ಲಹಳ್ಳಿ ಕುಮಾರ್, ದಲಿತ ಮುಖಂಡ ಸೋಸಲೆ ಸಿದ್ದರಾಜು, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ ವರಹಳ್ಳಿ ಆನಂದ್ ಹಾಗೂ ಇತರರು ಪಾಲ್ಗೊಂಡಿದ್ದರು.