ಹುಣಸೂರು ನಗರದಲ್ಲಿ ರಾಜ್ಯ ಅಲೆಮಾರಿ ಹಕ್ಕಿಪಿಕ್ಕಿ ಬುಡಕಟ್ಟು ಸಂರಕ್ಷಣಾ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಜಗ್ಗು, ಸುದೇಶ್, ಗುರುವಯ್ಯ, ಅನಿಲ್‌ಕುಮಾರ್, ಸುರೇಂದ್ರ ಇತರರು ಇದ್ದರು. 
ಮೈಸೂರು

ಮೂಲಸೌಕರ್ಯಕ್ಕೆ ಆಗ್ರಹಿಸಿ ಪ್ರತಿಭಟನೆ

ಮಾದೇಶ್ ತಿ.ನರಸೀಪುರ
ಹುಣಸೂರು: ತಾಲೂಕಿನ ಅಲೆಮಾರಿ ಕುಟುಂಬಗಳು ವಾಸಿಸುವ ಗ್ರಾಮಗಳಲ್ಲಿ ಮೂಲಸೌಕರ್ಯ, ಭೂಮಿಯ ಸಾಗುವಳಿ ಮಂಜೂರಾತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಲೆಮಾರಿ ಹಕ್ಕಿಪಿಕ್ಕಿ ಬುಡಕಟ್ಟು ಸಂರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ತಾಲೂಕು ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದ ಸಮಿತಿ ಸದಸ್ಯರು ಸರ್ಕಾರ ನ್ಯಾಯಯುತ ಬೇಡಿಕೆಗಳು ಈಡೇರಿಸಲಿ ಎಂದು ಘೋಷಣೆಗಳನ್ನು ಕೂಗಿದರು.
ಸಮಿತಿ ಅಧ್ಯಕ್ಷ ಜಗ್ಗು ಮಾತನಾಡಿ, ತಾಲೂಕಿನ ಶಂಕರಪುರ ಗ್ರಾಮದಲ್ಲಿ ಕಳೆದ 50 ವರ್ಷಗಳಿಂದ ಹಕ್ಕಿಪಿಕ್ಕಿ ಸಮುದಾಯದ 75ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಈ ಗ್ರಾಮದಲ್ಲಿ ರಸ್ತೆ, ಚರಂಡಿ ಸೇರಿದಂತೆ ಯವುದೇ ಮೂಲಸೌಕರ್ಯಗಳಿಲ್ಲ. ಈ ಗ್ರಾಮದ 13 ಕುಟುಂಬಗಳಿಗೆ ಸರ್ಕಾರ ಸರ್ವೇ ನಂ.50ರಲ್ಲಿ ತಲಾ ಒಂದು ಎಕರೆಯಂತೆ ಭೂಮಿ ನೀಡಿದ್ದು ಮಿಕ್ಕ ಕುಟುಂಬಗಳಿಗೆ ಇನ್ನೂ ಭೂಮಿ ಸಿಕ್ಕಿಲ್ಲ. ಭೂಮಿ ಇರುವ ಕುಟುಂಬಗಳಿಗೆ ಈವರೆಗೆ ಸಾಗುವಳಿ ಪತ್ರ ವಿತರಿಸಿಲ್ಲ. ಕಾಡಂಚಿನ ಗ್ರಾಮವಾಗಿ ಜೀವನೋಪಾಯಕ್ಕಾಗಿ ಕೃಷಿ ಮಾಡುತ್ತಿರುವ ಜನರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸಿ ತೊಂದರೆ ನೀಡುತ್ತಿದೆ. ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೇ ನಡೆಸಿ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.
ರೇಷನ್ ಕಾರ್ಡ್ ರದ್ದು:
ತಾಲೂಕಿನ ಎರಡನೇ ಪಕ್ಷಿರಾಜಪುರದಲ್ಲಿ 700 ಕುಟುಂಬಗಳು ವಾಸಿಸುತ್ತಿದ್ದು, ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. 100ಕ್ಕೂ ಹೆಚ್ಚು ಕುಟುಂಬಗಳು ವಸತಿ ಸೌಲಭ್ಯವಿಲ್ಲದೆ ಗುಡಿಸಲಿನಲ್ಲಿ ವಾಸಿಸುತ್ತಿವೆ. 50ಕ್ಕೂ ಹೆಚ್ಚು ಕುಟುಂಬಗಳಿಗೆ ರೇಷನ್ ಕಾರ್ಡ್ ನೀಡಿಲ್ಲ. ಕೆಲವೊಂದು ಕುಟುಂಬಗಳಿಗೆ ನೀಡಿದ್ದ ಬಿಪಿಎಲ್ ಕಾರ್ಡನ್ನು ಎಪಿಎಲ್‌ಆಗಿ ಪರಿವರ್ತಿಸಿ ಸಮಸ್ಯೆ ಸೃಷ್ಟಿಸಿದ್ದಾರೆ.
ಒಂದನೇ ಪಕ್ಷಿರಾಜಪುರ, ಚಂದನಗಿರಿ ಹಾಡಿಯಲ್ಲಿರುವ ಹಕ್ಕಿಪಿಕ್ಕಿ ಸಮುದಾಯದವು ಇದೇ ಸಮಸ್ಯೆಯನ್ನು ಎದುರಿಸುತ್ತಿದೆ. ಈ ನಾಲ್ಕು ಗ್ರಾಮಗಳಿಗೆ ಈವರೆಗೆ ರುದ್ರಭೂಮಿಯಿಲ್ಲದೆ ಜನರು ಪರದಾಡುತ್ತಿದ್ದಾರೆ. ಮೃತದೇಹಗಳನ್ನು ಜಮೀನು ಹೊಂದಿದವರ ಭೂಮಿಯಲ್ಲಿ ಅಥವಾ ನಾಲೆ, ಹೊಳೆ ಬದಿಯಲ್ಲಿ ಅಂತ್ಯಸಂಸ್ಕಾರ ಮಾಡುವಂತಾಗಿದೆ. ತಾಲೂಕು ಆಡಳಿತ ಈ ಕೂಡಲೇ ಸಮಸ್ಯೆ ಬಗೆಹರಿಸುವತ್ತ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಂದ್ರ, ಉಪಾಧ್ಯಕ್ಷ ಅನಿಲ್‌ಕುಮಾರ್, ಗುರುವಯ್ಯ, ಚಂದ್ರಶೇಖರ್, ಸುದೇಶ್, ಕೃಷ್ಣ, ಚಂದರಾಜ್, ಲತಾ, ಸುಜಾತಾ, ಸವಿತಾ, ಮಣಿಮಾಲತಿ, ಮೇಹರಾಣಿ ಇತರರು ಇದ್ದರು. ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯರಾಣಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.