ಒಳಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.
- ಮೀಸಲಾತಿ ಸಂಬಂಧ ಹೊರಡಿಸಿದ್ದ ಆದೇಶಗಳನ್ನು ಅಳವಡಿಸದೆ ನೇಮಕಾತಿ ಮಾಡಲು ಸೂಚಿಸಿರುವುದು ಮಾದಿಗ ಸಮುದಾಯಕ್ಕೆ ಮಾಡಿದ ಗಂಭೀರ ಅನ್ಯಾಯ
- ಗ್ರೂಪ್ ಎ, ಬಿ, ಸಿ ವರ್ಗೀಕರಣದಂತೆ ಒಳ ಮೀಸಲಾತಿ ಉಪವರ್ಗೀಕರಣ ಮಾಡಬೇಕು
ಮೈಸೂರು:ಸರ್ಕಾರ ಈಗ ಘೋಷಣೆ ಮಾಡಿರುವ ಹುದ್ದೆ ಭರ್ತಿಯ ಎ, ಬಿ, ಸಿ.ಯಲ್ಲಿಯೂ ಶೇ.15ರಷ್ಟು ಒಳಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಮಾದಿಗ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.
ಪುರಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿ, 56,342 ಖಾಲಿ ಹುದ್ದೆಗಳ ಭರ್ತಿಯಲ್ಲಿ ಶೇ.15 ಒಳಮೀಸಲಾತಿಯನ್ನು ಗ್ರೂಪ್ ಎ, ಬಿ, ಸಿ ವರ್ಗೀಕರಣದಂತೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾಯ್ದೆ ರೂಪಿಸಿ ರಾಜ್ಯಪಾಲರಿಂದ ಅಂಕಿತ ಪಡೆದಿರುವುದು ಮಾದಿಗ ಸಮುದಾಯದ 35 ವರ್ಷಗಳ ಹೋರಾಟಕ್ಕೆ ದೊರೆತ ಐತಿಹಾಸಿಕ ನ್ಯಾಯವಾಗಿದೆ ಎಂದರು.
ಆದರೆ ಸಚಿವ ಸಂಪುಟದ ನಿರ್ಣಯದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ಸರ್ಕಾರದ ಆದೇಶದಲ್ಲಿ 2022ರ ಡಿ.28ರ ಪೂರ್ವ ಮೀಸಲಾತಿ ವ್ಯವಸ್ಥೆಯಂತೆ ಪರಿಶಿಷ್ಟ ಜಾತಿಗೆ ಶೇ.15, ಪರಿಶಿಷ್ಟ ಪಂಗಡಕ್ಕೆ ಶೇ.3 ಮೀಸಲಾತಿ ಹಾಗೂ ರೋಸ್ಟರ್ ಮಾರ್ಗಸೂಚಿಗಳಂತೆ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.
ಈ ಆದೇಶದಲ್ಲಿ ಒಳ ಮೀಸಲಾತಿ ಸಂಬಂಧ ಹೊರಡಿಸಿದ್ದ ಆದೇಶಗಳನ್ನು ಅಳವಡಿಸದೆ ನೇಮಕಾತಿ ಮಾಡಲು ಸೂಚಿಸಿರುವುದು ಮಾದಿಗ ಸಮುದಾಯಕ್ಕೆ ಮಾಡಿದ ಗಂಭೀರ ಅನ್ಯಾಯ ಹಾಗೂ ನಂಬಿಕೆ ದ್ರೋಹ ಎಂದು ಕಿಡಿಕಾರಿದರು.
ರಾಜ್ಯದಲ್ಲಿರುವ 56,342 ಖಾಲಿ ಹುದ್ದೆಗಳ ಭರ್ತಿಯನ್ನು ಒಳಮೀಸಲಾತಿಯ ಶೇ.15 ಹಂಚಿಕೆಯನ್ನು ಸ್ಪಷ್ಟವಾಗಿ ಅನ್ವಯಿಸಿ ಮಾತ್ರ ಕೈಗೊಳ್ಳಬೇಕು. ಉಪ ಗುಂಪುಗಳವಾರು ಹಂಚಿಕೆ ಹಾಗೂ ಪರಿಷ್ಕೃತ ರೋಸ್ಟರ್ ಜಾರಿಗೊಳಿಸಿ, ಕಾನೂನು ಸಮರ್ಥನೆಗಳೊಂದಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯ ದತ್ತಾಂಶಗಳ ಆಧಾರದ ಮೇಲೆ ಶೇ.15 ರಷ್ಟು ಒಳಮೀಸಲಾತಿಯನ್ನು ಪರಿಶಿಷ್ಟ ಜಾತಿಯ ಗ್ರೂಪ್ ಎ, ಬಿ, ಸಿಯಂತೆ ಉಪ ವರ್ಗೀಕರಣದಂತೆ ಜಾರಿಗೊಳಿಸಿ ಸ್ಪಷ್ಟ ತಿದ್ದುಪಡಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.
ಇದಲ್ಲದೆ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ.36 ರಿಂದ ಶೇ.50ಕ್ಕೆ ಇಳಿಸಿರುವ ವಿಚಾರದಲ್ಲಿ ಸರ್ಕಾರ ನ್ಯಾಯಾಲಯದ ಮುಂದೆ ಸಂವಿಧಾನಾತ್ಮಕ ಹಾಗೂ ಕಾನೂನು ಆಧಾರದ ಮೇಲೆ ಸಮಗ್ರ ಹಾಗೂ ಪ್ರಬಲ ವಾದ ಮಂಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾಕಾರರ ಹಕ್ಕೊತ್ತಾಯಗಳು
ಫೆ.27ರ ಸಚಿವ ಸಂಪುಟದ ಆದೇಶವನ್ನು ತಕ್ಷಣ ಹಿಂಪಡೆಯಬೇಕು. 56,342 ಖಾಲಿ ಹುದ್ದೆಗಳ ಭರ್ತಿಗೆ ಶೇ.15 ರಷ್ಟು ಒಳ ಮೀಸಲಾತಿ ಅನ್ವಯಿಸುವ ತಿದ್ದುಪಡಿ ಆದೇಶದನ್ವಯ ಜಾರಿಗೊಳಿಸಬೇಕು. ನಾಗಮೋಹನ್‌ದಾಸ್ ವರದಿಯ ಆಧಾರದ ಮೇಲೆ ಪರಿಶಿಷ್ಟ ಜಾತಿಗಳನ್ನು ಗ್ರೂಪ್ ಎ, ಬಿ, ಸಿ ವರ್ಗೀಕರಣದಂತೆ ಒಳ ಮೀಸಲಾತಿ ಉಪವರ್ಗೀಕರಣ ಮಾಡಬೇಕು ಎಂದು ಆಗ್ರಹಿಸಿದರು.
ಶೇ.56 ರಷ್ಟು ಮೀಸಲಾತಿ ವ್ಯವಸ್ಥೆಯನ್ನು ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪರಿಷ್ಕೃತ ರೋಸ್ಟರ್ ವ್ಯವಸ್ಥೆ ಪ್ರಕಟಿಸಿ ಉಪ ಗುಂಪುಗಳವಾರು ಹಂಚಿಕೆ ಖಚಿತಪಡಿಸಬೇಕು. ಶೇ.56 ರಷ್ಟು ಮೀಸಲಾತಿ ಪ್ರಮಾಣವನ್ನು ನ್ಯಾಯಾಲಯದ ಮುಂದೆ ದೃಢವಾಗಿ ಸಮರ್ಥಿಸಬೇಕು. ಒಳಮೀಸಲಾತಿ ಸಂಪೂರ್ಣ ಜಾರಿ ಆಗುವವರೆಗೂ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಇತರ ಖಾತೆ ನೀಡುವುದು ಹಾಗೂ ಅಲ್ಲಿ ಇರುವ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಇತರ ಅಧಿಕಾರಿಗಳನ್ನು ಬದಲಾಯಿಸಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಸಂಚಾಲಕ ಮರಡಿಪುರ ರವಿಕುಮಾರ್, ಬಸಪ್ಪ ಗಾಂಧಿನಗರ, ಕುಮಾರರಾಮು, ಹಲಗಯ್ಯನಹುಂಡಿ ಶಂಕರ್, ಕೊಳ್ಳೇಗಾಲ ರಾಜಣ್ಣ, ಶಿವರಾಮು ಹುಣಸೂರು, ವೆಂಕಟೇಶ್ ಬೆಳ್ತೂರು ಇತರರು ಇದ್ದರು.