ಕುಕ್ಕರಹಳ್ಳಿ ಕೆರೆ ಪ್ರದೇಶದಲ್ಲಿ ವಾಣಿಜ್ಯ ಮತ್ತು ಬಹುಮಹಡಿ ಕಟ್ಟಡ ನಿರ್ಮಾಣ ನಿರ್ಬಂಧಿಸಬೇಕು ಎಂದು ಆಗ್ರಹಿಸಿ ಪರಿಸರ ಸಂರಕ್ಷಿಸಿ ಹೋರಾಟ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಡಾ.ಕೆ.ಎಂ.ಜಯರಾಮಯ್ಯ, ಭಾನುಮೋಹನ್, ಅರವಿಂದ್ ಶರ್ಮ, ಸೋಸಲೆ ಸಿದ್ದರಾಜು ಇತರರು ಇದ್ದರು.
- ವಾಣಿಜ್ಯ, ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ವಿರೋಧ
ಮೈಸೂರು: ವಾಣಿಜ್ಯ ಮತ್ತು ಬಹುಮಹಡಿ ಕಟ್ಟಡ ನಿರ್ಮಾಣ ನಿರ್ಬಂಧಿಸಿ, ಕುಕ್ಕರಹಳ್ಳಿ ಕೆರೆಯ ಪರಿಸರ ಸಂರಕ್ಷಣೆ ಮಾಡಬೇಕೆಂದು ಆಗ್ರಹಿಸಿ ಪರಿಸರ ಸಂರಕ್ಷಿಸಿ ಹೋರಾಟ ಸಮಿತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ಕುಕ್ಕರಹಳ್ಳಿ ಕೆರೆ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನ ಹೃದಯ ಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆ ಪರಿಸರ ತಾಣ. ಈ ಹಿಂದೆ ಕೆರೆಯ ಪ್ರದೇಶದಲ್ಲಿನ ನೀರನ್ನು ಮೈಸೂರಿನ ಸುತ್ತಮುತ್ತಲಿನ ನಿವಾಸಿಗಳು ಕುಡಿಯಲು, ಬಟ್ಟೆ ತೊಳೆಯಲು, ದನ-ಕರುಗಳಿಗೆ ಬಳಸಿಕೊಳ್ಳುತ್ತಿದ್ದರು. ಕಾಲಕ್ರಮೇಣ ಈ ಪ್ರದೇಶ ಬದಲಾಗಿ ಪಶು-ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ.
ವಾಯುವಿಹಾರಿಗಳಿಗೆ ಶುದ್ಧ ಗಾಳಿ ನೀಡುವ ಸುಂದರ ಪರಿಸರವಾಗಿದೆ. ಈ ಹಿಂದೆ ರಾಜರು ಮೈಸೂರಿನ ಜನರಿಗಾಗಿ ಈ ಪ್ರದೇಶವನ್ನು 400 ಎಕರೆ ಕಾಯ್ದಿಟ್ಟಿದ್ದರು. ಆದರೆ, ಪ್ರಸ್ತುತ ಈ ಕೆರೆ ಸುತ್ತಮುತ್ತಲಿನ ಪ್ರದೇಶಗಳು ಒತ್ತುವರಿಯಾಗಿ ಈಗ ಕೆರೆ 100 ಎಕರೆ ಹಾಗೂ ಕೆರೆ ಆವರಣ 110 ಎಕರೆ ಮಾತ್ರ ಉಳಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಈ ಪ್ರದೇಶದಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರ ಉದ್ಯಾನದ 2.20 ಎಕರೆ ಪ್ರದೇಶವನ್ನು ವಾಣಿಜ್ಯ ವಲಯಕ್ಕೆ ಬದಲಾಯಿಸಿಕೊಂಡಿದೆ. ನಿತ್ಯ ಬೆಳಗ್ಗೆ ಹಾಗೂ ಸಂಜೆಯ ಸಂದರ್ಭದಲ್ಲಿ ಈ ಪ್ರದೇಶವನ್ನು ವಾಯುವಿಹಾರಿಗಳು ತಮ್ಮ ಉತ್ತಮ ಆರೋಗ್ಯಕ್ಕಾಗಿ ವ್ಯಾಯಮ ಮಾಡುತ್ತಾರೆ.
ಚಿಕ್ಕ ಮಕ್ಕಳಿಗೆ ಆಟವಾಡಲು ಬಳಸಿಕೊಳ್ಳುತ್ತಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರು ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದಾಗ ಮಾನಸಗಂಗೋತ್ರಿ ಆವರಣದೊಂದಿಗೆ ಈ ಕೆರೆಯನ್ನೂ ಅಭಿವೃದ್ಧಿ ಪಡಿಸಿದ್ದರು. ಅವರ ಹೆಸರಿನ ಒಂದು ಉದ್ಯಾನವೂ ಇದೆ.
ಈ ಪ್ರದೇಶ ಮೈಸೂರು ವಿಶ್ವವಿದ್ಯಾಲಯದ ಆವರಣಕ್ಕೆ ಹೊಂದಿಕೊಂಡಿದೆ. ಇಲ್ಲಿನ ಕೆರೆ ದೇಶ-ವಿದೇಶಗಳ ಅಪರೂಪದ ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ. ಇಂತಹ ಪ್ರದೇಶದಲ್ಲಿ ವಾಣಿಜ್ಯ ಮತ್ತು ಬಹುಮಹಡಿ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಿರುವುದು ಸರಿಯಲ್ಲ. ಇಲ್ಲಿನ ಪರಿಸರಕ್ಕೆ ಅದು ಹಾನಿ ಉಂಟು ಮಾಡಲಿದೆ ಎಂದೂ ಕಿಡಿಕಾರಿದರು.
ಕುಕ್ಕರಹಳ್ಳಿ ಕೆರೆಯ ಪ್ರದೇಶದಲ್ಲಿ ಯಾವುದೆ ರೀತಿಯ ವಾಣಿಜ್ಯ, ಬಹುಮಹಡಿ ಕಟ್ಟಡ ನಿರ್ಮಿಸಬಾರದು. ಇಲ್ಲಿನ ಪರಿಸರ ರಕ್ಷಿಸಬೇಕು. ಇಲ್ಲವಾದರೆ ಪರಿಸರವಾದಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರ್ನಾಟಕ ಕೆರೆ ಸಂಕರ‌್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ.ಕೆ.ಎಂ.ಜಯರಾಮಯ್ಯ, ಭಾನುಮೋಹನ್, ಅರವಿಂದ್ ಶರ್ಮ, ಸೋಸಲೆ ಸಿದ್ದರಾಜು ಇತರರು ಇದ್ದರು.