‘ಯುದ್ಧ ನಿಲ್ಲಿಸಿ, ಗ್ಯಾಸ್ ಸಿಲಿಂಡರ್ ಕೊಡಿ’ ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ತೆಂಗಿನಕಾಯಿ ಒಡೆದು ನಗರದಲ್ಲಿ ಪ್ರತಿಭಟನೆ ನಡೆಯಿತು. ವಾಟಾಳ್ ನಾಗರಾಜ್, ಪಾರ್ಥಸಾರಥಿ, ಮೂಗೂರು ನಂಜುಂಡಸ್ವಾಮಿ, ತೇಜೇಶ್ ಲೋಕೇಶ್‌ಗೌಡ, ಶಿವಶಂಕರ್, ಸಿಂದುವಳ್ಳಿ ಶಿವಕುಮಾರ್, ಶಿವರಾಮ್, ರಾಧಾಕೃಷ್ಣ, ದರ್ಶನ್‌ಗೌಡ, ರವೀಶ್ ಇತರರು ಇದ್ದರು.
ಮೈಸೂರು:‘ಯುದ್ಧ ನಿಲ್ಲಿಸಿ, ಗ್ಯಾಸ್ ಸಿಲಿಂಡರ್ ಕೊಡಿ’ ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ತೆಂಗಿನಕಾಯಿ ಒಡೆದು ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಜಯಚಾಮರಾಜ ಒಡೆಯರ್ ವೃತ್ತದಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಯುದ್ಧ ನಿಲ್ಲಿಸಿ ಶಾಂತಿ ನೆಲೆಸಲು ವಿಶ್ವಸಂಸ್ಥೆ ಮಧ್ಯೆ ಪ್ರವೇಶಿಸಬೇಕು ಎಂದು ಆಗ್ರಹಿಸಿದರು.
ಕರೊನಾ ಲಾಕ್‌ಡೌನ್ ಸಮಸ್ಯೆಯಿಂದ ದೇಶದ ಜನರು ಈಗಾಗಲೇ ಸಂಕಷ್ಟದಲ್ಲಿ ಇದ್ದಾರೆ. ಈಗ ಕೊಲ್ಲಿ ರಾಷ್ಟ್ರದಲ್ಲಿ ನಡೆಯುತ್ತಿರುವ ಯುದ್ಧದಿಂದ ಗ್ಯಾಸ್ ದೊರೆಯದೆ ಸಣ್ಣ ವ್ಯಾಪಾರಿಗಳು ಜೀವನ ನಡೆಸುವುದು ಕಷ್ಟವಾಗಿದೆ ಎಂದು ದೂರಿದರು.
ಪ್ರಧಾನಮಂತ್ರಿ ನರೇಂದ್ರಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಸ್ಯೆಗೆ ಪರಿಹಾರ ಹುಡುಕುವತ್ತ ಚಿಂತನೆ ನಡೆಸಬೇಕು. ರಾಜ್ಯದಿಂದ ಕೇವಲ ಪತ್ರ ಬರೆದು ಸುಮ್ಮನೆ ಕುಳಿತುಕೊಂಡರೆ ಸಮಸ್ಯೆ ಬಗೆಹರಿಯುವುದಿಲ್ಲ. ಆಟೋ ಚಾಲಕರು ತೀವ್ರ ಸಮಸ್ಯೆ ಎದುರಿಸುತ್ತಿರುವುದರಿಂದ ತಿಂಗಳಿಗೆ 15 ಸಾವಿರ ರೂ. ಪರಿಹಾರ ನೀಡಿ ಅವರ ಜೀವನ ನಡೆಸಲು ಸಹಾಯ ಮಾಡಬೇಕು ಎಂದು ಒತ್ತಾಯ ಮಾಡಿದರು.
ಸಮಸ್ಯೆಗೆ ಪರಿಹಾರ ಕಂಡುಕೊಳ್ಳದಿದ್ದರೆ ಮುಖ್ಯಮಂತ್ರಿ ಮನೆಗೆ ನುಗ್ಗಿ ಸಿಲಿಂಡರ್ ತಂದು ಬಡವರಿಗೆ ಹಂಚುವ ಚಳವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೇ ಡ್ರಗ್ಸ್ ಫ್ಯಾಕ್ಟರಿ ನಡೆಯುತ್ತಿರುವುದು ದುರಂತ. ಇದರ ಪತ್ತೆಗೆ ಮುಂಬೈ ಪೊಲೀಸರು ಬರಬೇಕಾಯಿತು. ಇದಕ್ಕೆ ಕಡಿವಾಣ ಹಾಕಿ ಯುವಜನರನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಪಾರ್ಥಸಾರಥಿ, ಮೂಗೂರು ನಂಜುಂಡಸ್ವಾಮಿ, ತೇಜೇಶ್ ಲೋಕೇಶ್‌ಗೌಡ, ಶಿವಶಂಕರ್, ಸಿಂದುವಳ್ಳಿ ಶಿವಕುಮಾರ್, ಶಿವರಾಂ, ರಾಧಾಕೃಷ್ಣ, ದರ್ಶನ್‌ಗೌಡ, ರವೀಶ್ ಇತರರು ಇದ್ದರು.