ಬಿಡದಿ ಬಳಿ ರೈತರ ಫಲವತ್ತಾದ ಜಮೀನು ವಶಪಡಿಸಿಕೊಂಡು ಟೌನ್‌ಶಿಪ್ ಮಾಡುವುದನ್ನು ಕೈ ಬಿಡುವಂತೆ ಆಗ್ರಹಿಸಿ ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಕುರುಬೂರು ಶಾಂತಕುಮಾರ್, ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮೂಕಳ್ಳಿ ಮಹದೇವಸ್ವಾಮಿ, ಮಾರ್ಬಳ್ಳಿ ನೀಲಕಂಠಪ್ಪ ಇತರರು ಇದ್ದರು.
- ಟೌನ್‌ಶಿಪ್ ನಿರ್ಮಿಸುವ ಮೂಲಕ ಬಂಡವಾಳ ಶಾಹಿಗಳಿಗೆ ಸರ್ಕಾರ ಅನುಕೂಲ ಮಾಡಿಕೊಡಲು ಮುಂದಾಗಿದೆ
- ಜಮೀನು ಮಾಲೀಕರು ಸತತವಾಗಿ ಹೋರಾಟ ಮಾಡುತ್ತ ಇದ್ದರೂ ಸ್ಪಂದಿಸಿಲ್ಲ
ಮೈಸೂರು:ಬಿಡದಿ ಬಳಿ ರೈತರ ಫಲವತ್ತಾದ ಜಮೀನು ವಶಪಡಿಸಿಕೊಂಡು ಟೌನ್‌ಶಿಪ್ ಮಾಡುವುದನ್ನು ಕೈ ಬಿಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.
ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿಯ ಸುತ್ತಮುತ್ತಲಿನ 7500 ಎಕರೆೆ ಜಮೀನುಗಳನ್ನು ರಾಜ್ಯ ಸರ್ಕಾರ ವಶಪಡಿಸಿಕೊಂಡು ಟೌನ್‌ಶಿಪ್ ನಿರ್ಮಿಸುವ ಮೂಲಕ ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡಲು ಮುಂದಾಗಿದೆ ಎಂದು ಹೋರಾಟಗಾರರು ದೂರಿದರು.
ತೆಂಗು, ಅಡಿಕೆ ಸೇರಿದಂತೆ ಇನ್ನಿತರ ಮರಗಳನ್ನು ಕಡಿದು, ಬೆಳೆಯನ್ನು ನಾಶಪಡಿಸಿ ಪರಿಸರಕ್ಕೆ ಮಾರಕವಾಗುವಂತೆ ಮಾಡುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ, ಜಮೀನು ಮಾಲೀಕರು ಸತತವಾಗಿ ಹೋರಾಟ ಮಾಡುತ್ತ ಇದ್ದರೂ ಸರ್ಕಾರ ಅವರ ಮನವಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಪ್ರಜಾ ಸೇವಕ ಆಗಿದ್ದು, ಪ್ರಜೆಗಳ ಅಭಿಪ್ರಾಯವನ್ನು ಧಿಕ್ಕರಿಸಿ ಆಡಳಿತ ನಡೆಸಬಾರದು. ಅಲ್ಲದೆ ಇಂತಹ ವಿಚಾರದಲ್ಲಿ ರಾಜಕೀಯ ಪಕ್ಷಗಳ ಕಿತ್ತಾಟಕ್ಕೆ ರೈತರೂ ಬಲಿಯಾಗಬಾರದು. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು, ರೈತರನ್ನು ರಕ್ಷಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬರಪೀಡಿತ ಪ್ರದೇಶಗಳನ್ನು ವೈಜ್ಞಾನಿಕ ಸಮೀಕ್ಷೆಯ ಆಧಾರದ ಮೇಲೆ ತಕ್ಷಣ ಘೋಷಿಸಬೇಕು, ರೈತರಿಗೆ ಸಮರ್ಪಕ ಬರ ಪರಿಹಾರವನ್ನು ವಿಳಂಬವಿಲ್ಲದೆ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು, ಕೃಷಿ ಸಾಲಗಳ ಮರುಪಾವತಿಗೆ ವಸೂಲಾತಿ ನಿಲ್ಲಿಸಬೇಕು. ಹಾಗೂ ಬಡ್ಡಿ ಮನ್ನಾ ಮಾಡಬೇಕು, ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಸರ್ಕಾರದಿಂದ ತುರ್ತಾಗಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸಬೇಕು, ಬೆಳೆ ವಿಮೆ ಪರಿಹಾರವನ್ನು ತ್ವರಿತವಾಗಿ ರೈತರಿಗೆ ವಿತರಿಸಬೇಕು, ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಹಾಗೂ ಇತರ ಪರ್ಯಾಯ ವ್ಯವಸ್ಥೆಗಳನ್ನು ಒದಗಿಸಬೇಕು, ಬರವು ಕೇವಲ ರೈತರ ಸಮಸ್ಯೆಯಲ್ಲ; ಪ್ರಕೃತಿಯ ಶಾಪ. ಅದು ಆಹಾರ ಭದ್ರತೆ, ಗ್ರಾಮೀಣ ಆರ್ಥಿಕತೆ ಮತ್ತು ಜನಜೀವನದ ಮೇಲೆಯೇ ಪರಿಣಾಮ ಬೀರುತ್ತದೆ. ಆದ್ದರಿಂದ ಸರ್ಕಾರಗಳು ರಾಜಕೀಯ ಭೇದ ಮರೆತು ಮಾನವೀಯ ದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಮುಖಂಡರಾದ ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಮೂಕಳ್ಳಿ ಮಹದೇವಸ್ವಾಮಿ, ಮಾರ್ಬಳ್ಳಿ ನೀಲಕಂಠಪ್ಪ, ವರಕೂಡು ನಾಗೇಶ್, ಪಟೇಲ್ ಶಿವಮೂರ್ತಿ, ಸತೀಶ್, ಗುರುಸ್ವಾಮಿ, ಕುರುಬೂರು ಸಿದ್ದೇಶ್, ವಿಜಯೇಂದ್ರ, ಉಡಿಗಾಲ ರೇವಣ್ಣ, ಸುಂದರಪ್ಪ ಇತರರು ಇದ್ದರು.