ಹಳೇ ಮೀಸಲಾತಿ ಪದ್ಧತಿ ಜಾರಿಗೆ ಆಗ್ರಹಿಸಿ ಬಲಗೈ ಜಾತಿಗಳ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು 
ಮೈಸೂರು

ಹಳೇ ಮೀಸಲಾತಿ ಜಾರಿಗೆ ಆಗ್ರಹಿಸಿ "ಬಲಗೈ' ಜಾತಿಗಳಿಂದ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಬಲಗೈ ಜಾತಿಗಳ ಒಕ್ಕೂಟ ಹಾಗೂ ಅಶೋಕಪುರಂ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ
  • ನ್ಯಾ.ನಾಗಮೋಹನ್ ದಾಸ್ ಒಳ ಮೀಸಲಾತಿ ವರದಿ ತಿರಸ್ಕಾರಕ್ಕೆ ಆಗ್ರಹ
ಮೈಸೂರು: ಹಳೇ ಮೀಸಲಾತಿ ಪದ್ಧತಿ ಜಾರಿಗೆ ಆಗ್ರಹಿಸಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು.
ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ ಹಾಗೂ ಅಶೋಕಪುರಂ ದಲಿತ ಸಂಘಟನೆಗಳ ಒಕ್ಕೂಟದಿಂದ ನಡೆದ ಪ್ರತಿಭಟನೆಯಲ್ಲಿ ನಿವೃತ್ತ ನ್ಯಾ.ನಾಗಮೋಹನ್ ದಾಸ್ ಒಳ ಮೀಸಲಾತಿ ವರದಿಯನ್ನು ತಿರಸ್ಕರಿಸುವಂತೆ ಒತ್ತಾಯಿಸಲಾಯಿತು
ನಗರದ ಅಶೋಕಪುರಂನಿಂದ ನೂರಾರು ಜನರು ಬೈಕ್ ರ‌್ಯಾಲಿ ನಡೆಸಿದರು. ಮತ್ತೊಂದೆಡೆ ದಲಿತ ಸಂಘಟನೆಗಳು ವರುಣ ಮತ್ತು ತಿ. ನರಸೀಪುರದಿಂದ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎರಡು ಸಂಘಟನೆಗಳು ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು. 
ಸರ್ಕಾರ ಮತ್ತು  ಎಚ್.ಎನ್.ನಾಗಮೋಹನ್ ದಾಸ್ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬನ್ನೂರು ರಸ್ತೆಯ ಗೌತಮ ಬುದ್ಧ ವೃತ್ತದ ಆವರಣದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಲೇಖಕ ಸಿ.ಹರಕುಮಾರ್ ಮಾತನಾಡಿ, ಒಳ ಮೀಸಲಾತಿ ಹಾದಿಬೀದಿ ರಂಪಾಟ ಆಗಿದೆ. ಸರ್ಕಾರಕ್ಕೆ ಒಳ ಮೀಸಲಾತಿ ನಿರ್ಧಾರದಿಂದ ಹಿಂದೆ ಸರಿಯಬೇಕು. ಕಡ್ಡಾಯವಾಗಿ ಜಾರಿ ಮಾಡಬೇಕಾದರೆ ನ್ಯಾಯಾಲಯದ ವಿಮರ್ಶೆಗೆ ಒಳಪಡಿಸಬೇಕು. 101 ಪರಿಶಿಷ್ಟ  ಜಾತಿಗಳಿಗೆ ಅನ್ಯಾಯವಾಗದಂತೆ ಮೀಸಲಾತಿ ಹಂಚಿಕೆ ಮಾಡಬೇಕು ಎಂದು ಹೇಳಿದರು.
ಒಂದು ವೃತ್ತದಲ್ಲಿ ಒಂದೇ ಹುದ್ದೆ ಇದ್ದಾಗ ಮೀಸಲಾತಿ ಅನ್ವಯವಾಗುವುದಿಲ್ಲ. 3 ಹುದ್ದೆಗಳಿಂತ ಹೆಚ್ಚು ಹುದ್ದೆ ಇದ್ದಾಗ ಒಳ ಮೀಸಲಾತಿ ಅನ್ವಯ ಮಾಡಬೇಕು. ಈ ನಿಯಮ ನಿಗದಿ ಮಾಡಬೇಕು. ಘಟಕ ಮಾಡಿದರೆ ಸೂಕ್ತವಾದ ಪ್ರಾತಿನಿಧ್ಯ ಸಿಗುವುದಿಲ್ಲ. 2011ರಿಂದ ಗ್ರೂಪ್ ಎ, ಬಿ ಹುದ್ದೆಗಳು ಊರ್ಜಿತವಾಗಿಲ್ಲ ಎಂದು ತಿಳಿಸಿದರು.
ಬಹುಜನ ಸಮಾಜ ಪಕ್ಷ ಒಳ ಮೀಸಲಾತಿ ಪರ ಇಲ್ಲ. ಉತ್ತರ ಭಾರತದಲ್ಲಿ ಒಳ ಮಿಸಲಾತಿ ಇಲ್ಲ. ಅಸ್ಪಶ್ಯ ಜಾತಿಗಳಿಗೆ ಒಳ ಮೀಸಲಾತಿ ಸಿಗಬೇಕು. ಸ್ಪಶ್ಯ ಜಾತಿಗಳಿಗೆ ಸಿಗಬಾರದು ಎಂದು ಹೇಳಿದರು.
ಮುಖಂಡ ಎನ್.ಭಾಸ್ಕರ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕುಲ ಶಾಸ್ತ್ರೀಯ ಅಧ್ಯಯನ ಮಾಡಲು ಕ್ರಮ ವಹಿಸಬೇಕು. ಈಗಿನ ಗೊಂದಲಕ್ಕೆ ಕಾರಣರಾದ ನಾಗಮೋಹನ್ ದಾಸ್ ವರದಿಯನ್ನು ತನಿಖೆಗೆ ಒಳಪಡಿಸಬೇಕು. ಅದಕ್ಕಾಗಿ ಉನ್ನತ ಮಟ್ಟದ ಸಮಿತಿ ರಚಿಸಬೇಕು. ಮಾ.25ರಂದು ಬೆಂಗಳೂರಲ್ಲಿ ನಡೆಯುವ ಬೃಹತ್ ಪ್ರತಿಭಟನೆಗೆ ಮೈಸೂರು ಜಿಲ್ಲೆಯಿಂದ 120 ಬಸ್‌ಗಳಲ್ಲಿ ತೆರಳಲಿದ್ದೇವೆ ಎಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕ ಪಿ.ಎಂ.ಮಹೇಶ್ ಮಾತನಾಡಿ, ನಾಗಮೋಹನ್ ದಾಸ್ ವರದಿ ಅವೈಜ್ಞಾನಿಕವಾಗಿದೆ. ಹಳೇ ಮೀಸಲಾತಿ ಅನ್ವಯ ನೇಮಕಾತಿ ಮಾಡಬೇಕು. ಪ್ರತ್ಯೇಕ ಮೀಸಲಾತಿಗೂ ಒಳ ಮೀಸಲಾತಿಗೂ ವ್ಯತ್ಯಾಸ ಇದೆ. ರೋಸ್ಟರ್ ಬಿಂದು ಅವೈಜ್ಞಾನಿಕ. ಒಳ ಮೀಸಲಾತಿ ಹುನ್ನಾರವೇ 101 ಸಮುದಾಯಗಳು ವಿಭಜನೆಯಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಅವೈಜ್ಞಾನಿಕವಾದ ಪಕ್ಷಪಾತದಿಂದ ಕೂಡಿರುವ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು. ಹಳೇಯ ಮೀಸಲಾತಿ ಅನ್ವಯ ನೇಮಕಾತಿಯನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಶಿವಣ್ಣ ಮಾತನಾಡಿ, ಬಲಗೈ ಸಮಾಜ ಯಾರ ಮೀಸಲಾತಿಯನ್ನು ಕಬಳಿಸಿಲ್ಲ. ಶಾಂತಿ ರೀತಿಯಲ್ಲಿ ಸರ್ಕಾರಕ್ಕೆ ನಮ್ಮ ಹಕ್ಕೊತ್ತಾಯ ಮಂಡಿಸಬೇಕು ಎಂದರು.
ವಕೀಲ ತಿಮ್ಮಯ್ಯ ಮಾತನಾಡಿ, ಒಳ ಮೀಸಲಾತಿ ಅವೈಜ್ಞಾನಿಕ ವರದಿಯನ್ನು ತಿರಸ್ಕಾರ ಮಾಡಬೇಕು ಎಂದರು. ಯುವ ಮುಖಂಡ ಭರತ್ ರಾಮಸ್ವಾಮಿ ಮಾತನಾಡಿ, ರೋಸ್ಟರ್ ಬಿಂದು ಸರಿಪಡಿಸಲಾಗದಿದ್ದರೆ ವರದಿಯನ್ನು ತಿರಸ್ಕರಿಸಬೇಕು ಎಂಬುದು ಆಗ್ರಹವಾಗಿದೆ ಎಂದು ಹೇಳಿದರು.
ಶ್ರೀ ಜ್ಞಾನ ಸ್ವರೂಪಾನಂದ ಸ್ವಾಮೀಜಿ, ಮಾಜಿ ಶಾಸಕ ಹರ್ಷವರ್ಧನ್, ಪಾಲಿಕೆ ಮಾಜಿ ಸದಸ್ಯೆ ಪಲ್ಲವಿ ಬೇಗಂ, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಎನ್.ಭಾಸ್ಕರ್, ಡಾ.ಮರಿದೇವಯ್ಯ, ಸಿದ್ದಸ್ವಾಮಿ, ಡಾ. ಜ್ಞಾನಪ್ರಕಾಶ, ಡಾ.ಮರಿದೇವಯ್ಯ, ಎ.ಆರ್.ಕಾಂತರಾಜ್, ಸೋಮಯ್ಯ ಮಲೆಯೂರು, ಜಿ.ಮಹದೇವ, ಅಮ್ಮ ರಾಮಚಂದ್ರ, ವಿ. ರಾಮಸ್ವಾಮಿ, ಗೋವಿಂದರಾಜು, ಗಾಂಧಿನಗರದ ಸಿದ್ದಪ್ಪ, ಡಾ.ಆನಂದ್, ಡಾ.ದಿಲೀಪ್ ನರಸಯ್ಯ, ಚೋರನಹಳ್ಳಿ ಶಿವಣ್ಣ, ಮಣಿಯಯ್ಯ, ವರಹಳ್ಳಿ ಆನಂದ್, ಡಾ.ನಟರಾಜ್ ಶಿವಣ್ಣ, ಕಲ್ಲಹಳ್ಳಿ ಕುಮಾರ್, ಮಲ್ಲೇಶ್, ವಕೀಲರಾದ ಪುಟ್ಟರಸ, ಸೂರ್ಯದೇವ್, ಮಹೇಶ್ ಇರಸವಾಡಿ ಇನ್ನಿತರರಿದ್ದರು