ಯೂನಿಟಿ ಮಾಲ್ ಬೇರೆಡೆ ನಿರ್ಮಿಸುವಂತೆ ಒತ್ತಾಯಿಸಿ ಮೈಸೂರು ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ಪ್ರತಿಭಟನೆ ನಡೆಯಿತು
- ಇತಿಹಾಸ ತಿಳಿಸಲು ಕೆರೆಗೆ ನೀರು ತುಂಬಿಸಿ ಕಾಯಕಲ್ಪ ಮಾಡಬೇಕು
- ವಸ್ತು ಪ್ರದರ್ಶನ ಮೈದಾನದಲ್ಲಿ ಯೂನಿಟಿ ಮಾಲ್ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ
- ಮೈಸೂರು ಹಿತಾಸಕ್ತಿ ಬಯಸುವ ಪ್ರತಿಯೊಬ್ಬ ನಾಗರಿಕನು ಕೆರೆ ಉಳಿಸಬೇಕು
ಮೈಸೂರು: ದಸರಾ ವಸ್ತು ಪ್ರದರ್ಶನದ ಮುಂಭಾಗ ಇರುವ ದೊಡ್ಡಕೆರೆ ಮೈದಾನಕ್ಕೆ ಕಾಯಕಲ್ಪ ನೀಡಿ, ಉದ್ದೇಶಿತ ಯೂನಿಟಿ ಮಾಲ್ ಅನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿ ಮೈಸೂರು ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಯಿತು.
ದೊಡ್ಡ ಕೆರೆ ಮೈದಾನದ ಬಳಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ದೊಡ್ಡ ಕೆರೆ ಮೈದಾನಕ್ಕೆ ಇತಿಹಾಸವಿದೆ. ಆದ್ದರಿಂದ ಮುಂದಿನ ತಲೆಮಾರಿಗೆ ನಗರದ ಇತಿಹಾಸ ತಿಳಿಸಲು ಕೆರೆಗೆ ನೀರು ತುಂಬಿಸಿ ಕಾಯಕಲ್ಪ ಮಾಡಬೇಕು ಎಂದು ಆಗ್ರಹಿಸಿದರು.
ಅಲ್ಲದೆ ವಸ್ತು ಪ್ರದರ್ಶನ ಮೈದಾನದಲ್ಲಿ ಯೂನಿಟಿ ಮಾಲ್ ನಿರ್ಮಿಸಲು ಮುಂದಾಗಿರುವುದು ಸರಿಯಲ್ಲ. ಕೆರೆ ಸಮೀಪ ನಿರ್ಮಾಣ ಮಾಡಿದರೆ ಮೈಸೂರು ಪರಂಪರೆ, ಅರಮನೆ ಸೌಂದರ್ಯ ಹಾಳಾಗುತ್ತದೆ ಎಂದರು.
ಈ ಜಾಗದಲ್ಲಿ ಸಂಸದರು ಯೂನಿಟಿ ಮಾಲ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಈ ಕೂಡಲೇ ಮಾಲ್ ಅನ್ನು ನಗರದ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ದೊಡ್ಡಕೆರೆಗೆ ಸಂಬಂಧಿಸಿದ ದಾಖಲೆ ಪತ್ರವನ್ನು ಒದಗಿಸಿ ಸರ್ಕಾರದ ವಶಕ್ಕೆ ಕೆರೆ ನೀಡಿದರೆ ಅರಮನೆಯ ಶ್ರೇಯಸ್ಸು ಹೆಚ್ಚಾಗುತ್ತದೆ. ಅರಮನೆಯ ಸೌಂದರ್ಯ ಹಾಗೂ ಪರಂಪರೆ ಉಳಿಯುತ್ತದೆ ಎಂದರು.
ಸುಮಾರು 131 ಎಕರೆ ಪ್ರದೇಶದ ದೊಡ್ಡ ಕೆರೆ ಮೈದಾನವನ್ನು ಮರು ನಿರ್ಮಾಣ ಮಾಡಿ, ದೊಡ್ಡಕೆರೆಗೆ ನೀರು ತುಂಬಿಸಿ ಮೈಸೂರು ಪರಂಪರೆ ಸೌಂದರ್ಯ ಹೆಚ್ಚಿಸಬೇಕು. ಕೆಆರ್‌ಎಸ್‌ನಿಂದ ಕೇವಲ 15 ಕಿ.ಮೀ. ದೂರದಲ್ಲಿರುವ ದೊಡ್ಡಕೆರೆ ಮೈದಾನಕ್ಕೆ ನೀರು ತುಂಬಿಸಲು ಸರ್ಕಾರಕ್ಕೆ ದೊಡ್ಡ ಕೆಲಸವಲ್ಲ, ಸಿದ್ದರಾಮಯ್ಯ ಅವರ ಹೆಸರು ಅಜರಾಮರವಾಗುತ್ತದೆ ಎಂದರು.
ದೊಡ್ಡಕೆರೆಗೆ ನೀರು ತುಂಬಿಸಿ ಜೀವಕಳೆ ತರಬೇಕು, ಸದನದಲ್ಲಿ ಚರ್ಚೆ ನಡೆಸಿ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಯೂನಿಟಿ ಮಾಲ್ ನಿರ್ಮಾಣಕ್ಕೆ ವಿರೋಧ ಇದೆ. ಈಗಾಗಲೇ ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹಾಕುತ್ತೇವೆ. ಮೈಸೂರು ಹಿತಾಸಕ್ತಿ ಬಯಸುವ ಪ್ರತಿಯೊಬ್ಬ ನಾಗರಿಕನು ನಮ್ಮ ಹೋರಾಟಕ್ಕೆ ಸ್ಪಂದಿಸುವ ಮೂಲಕ ದೊಡ್ಡಕೆರೆ ಮರು ನಿರ್ಮಾಣವಾಗಬೇಕು ಎಂದರು.
ವೇದಿಕೆ ಅಧ್ಯಕ್ಷ ಮೈ.ಕಾ.ಪ್ರೇಮ್‌ಕುಮಾರ್ ಇತರರಿದ್ದರು.