ಹುಣಸೂರು ನಗರದಲ್ಲಿ ರಾಜ್ಯ ವರ್ಜೀನಿಯಾ ತಂಬಾಕು ಬೆಳೆಗಾರರ ಒಕ್ಕೂಟದ ಸದಸ್ಯರು ತಂಬಾಕು ಉತ್ಪನ್ನಗಳ ಬೆಲೆಏರಿಕೆಯನ್ನು ಖಂಡಿಸಿ ಪ್ರತಿಭಟನ ನಡೆಸಿ ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಿದರು. ನಿಲುವಾಗಿಲು ಪ್ರಭಾಕರ್, ತಟ್ಟೆಕೆರೆ ಶ್ರೀನಿವಾಸ್, ನಂಜುಂಡೇಗೌಡ, ಲೋಕೇಶ್, ಬಸವರಾಜು, ಪ್ರವೀಣ್, ಶ್ರೀಶೈಲ ಇತರರಿದ್ದಾರೆ.  
ಮೈಸೂರು

ತಂಬಾಕು ಬೆಳೆಗಾರರ ಒಕ್ಕೂಟದ ಸದಸ್ಯರಿಂದ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸರ್ಕಾರ ಸಿಗರೇಟ್‌ಗಳ ಮೇಲಿನ ತೆರಿಗೆ ಹೆಚ್ಚಳದ ವಿರುದ್ಧ
  • ತೆರಿಗೆಯನ್ನು ವಿರೋಧಿಸಿ ಘೋಷಣೆ
ಹುಣಸೂರು: ಕೇಂದ್ರ ಸರ್ಕಾರ ತಂಬಾಕು ಉತ್ಪನ್ನಗಳಲ್ಲಿ ಒಂದಾದ ಸಿಗರೇಟ್‌ಗಳ ಮೇಲಿನ ತೆರಿಗೆಯನ್ನು ಎಗ್ಗಿಲ್ಲದೇ ಹೆಚ್ಚಿಸಿರುವುದನ್ನು ವಿರೋಧಿಸಿ ರಾಜ್ಯ ವರ್ಜೀನಿಯಾ ತಂಬಾಕು ಬೆಳೆಗಾರರ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು.
ಬುಧವಾರ ನಗರದ ಸಂವಿಧಾನವೃತ್ತದಲ್ಲಿ ಜಮಾವಣೆಗೊಂಡ ಒಕ್ಕೂಟದ ಸದಸ್ಯರು ಕೇಂದ್ರ ಸರ್ಕಾರದ ತಂಬಾಕು ಉತ್ಪನ್ನಗಳ ಮೇಲೆ ವಿಧಿಸಿರುವ ತೆರಿಗೆಯನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿದರು. ನಂತರ ನಗರದ ಪ್ರಮುಖ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಾಲೂಕುಕಚೇರಿ ಮುಂಭಾಗ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಎಚ್.ಜಿ.ಪರಮೇಶ್, ಕೇಂದ್ರ ಅಬಕಾರಿ(ತಿದ್ದುಪಡಿ)ವಿಧೇಯಕ 2025 ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಹಠಾತ್ ಹೆಚ್ಚಿಸುವ ಮೂಲಕ ರೈತರು ಮತ್ತು ಗ್ರಾಮೀಣ ಪಾಲುದಾರರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಅತಿಯಾದ ಬೆಲೆ ಏರಿಕೆ ಐತಿಹಾಸಿಕ ಬಳಕೆಯನ್ನು ಕಡಿಮೆಮಾಡುವಲ್ಲಿ ವಿಫಲವಾಗಿರುವುದು ಮಾತ್ರವಲ್ಲದೇ ಅಕ್ರಮ ವ್ಯಾಪಾರಕ್ಕೆ ದಾರಿ ಮಾಡಿಕೊಡುತ್ತದೆ. ಸರ್ಕಾರದ ಬೊಕ್ಕಸವೂ ತುಂಬುವುದಿಲ್ಲ. ಈ ಎಲ್ಲ ಬದಲಾವಣೆಗಳು ನೇರವಾಗಿ ರೈತರ ಹೊಟ್ಟೆಗೆ ತಣ್ಣೀರು ಬಟ್ಟೆ ಇರಿಸುತ್ತದೆ. ಸಿಗರೇಟಿನ ಉದ್ದವನ್ನು ಅವಲಂಬಿಸಿ 1000 ಸಿಗರೇಟಿಗೆ 2500ರೂ.ಗಳಿಂದ 8500ರೂ.,ವರಗೆ ಹೆಚ್ಚಳ ಮಾಡಲು ಸರ್ಕಾರ ನಿರ್ಧರಿಸಿರುವುದು ಖಂಡನೀಯವೆಂದರು.
ಒಕ್ಕೂಟದ ಸದಸ್ಯ ನಿಲುವಾಗಿಲು ಪ್ರಭಾಕರ್ ಮಾತನಾಡಿ, ತಂಬಾಕು ಉತ್ಪನ್ನಗಳ ದಿಢೀರ್ ಹೆಚ್ಚಳ ಕೇವಲ ಕಳ್ಳಸಾಗಣೆದಾರರಿಗೆ ಲಾಭ ಮಾಡಿಕೊಡಲು ಅವಕಾಶ ಮಾಡಿಕೊಟ್ಟಂತಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಅನಧೀಕೃತ ಸಿಗರೇಟ್‌ಗಳ ಹಾವಳಿ ಹೆಚ್ಚಾಗಿದ್ದು, ಇದೀಗ ಸರ್ಕಾರವೇ ಕಳ್ಳಮಾರಾಟ, ಕಳ್ಳಸಾಗಣೆಗೆ ಅನುವು ಮಾಡಿಕೊಟ್ಟಂತಾಗಲಿದೆ. ಕರ್ನಾಟಕದಲ್ಲಿ ಈಗಾಗಲೇ ತಂಬಾಕಿನ ಬೆಲೆ ಕುಸಿದಿದ್ದು, ಆಂಧ್ರ ಮತ್ತು ಕರ್ನಾಟಕ ರಾಜ್ಯಗಳ ನಡುವೆ ತಾರತಮ್ಯ ನೀತಿಯಿಂದಾಗಿ ರೈತರು ಬವಣೆ ಪಡುತ್ತಿದ್ದಾರೆ. ನೂತನ ಜಿಎಸ್‌ಟಿ ಪದ್ಧತಿಯನ್ನು ಕೇಂದ್ರ ಸರ್ಕಾರ ಘೋಷಿಸುವಾಗ ರೆವಿನ್ಯೂ ನ್ಯೂಟ್ರಲ್(ತಟಸ್ಥ ಆದಾಯ) ನೀತಿಯನ್ನು ಘೋಷಿಸಿತ್ತು. ಆದರೆ ಇದೀಗ ಕೇಂದ್ರದ ನೀತಿ ಬದಲಾಗಿದೆ. ಒಟ್ಟಾರೆ ತೆರಿಗೆಯನ್ನು ಬದಲಾಗದಂತೆ ಇರಿಸಲಾಗುವುದೆಂದು ಸರ್ಕಾರ ನೀಡಿದ್ದ ಭರವಸೆ ಹುಸಿಯಾಗಿದೆ. ಸಮೀಕ್ಷೆಗಳ ಪ್ರಕಾರ ಭಾರತವು ಕಳ್ಳಸಾಗಣೆ ಜಾಲದಲ್ಲಿ ವಿಶ್ವದ ನಾಲ್ಕನೇ ಅತಿದೊಡ್ಡ ಮಾರುಕಟ್ಟೆಯನ್ನು ಹೊಂದಿದೆ ಎನ್ನಲಾಗಿದೆ. ಕಳ್ಳಸಾಗಣೇ ಉತ್ಪನ್ನಗಳ ಬೆಲೆ ಕಡಿಮೆಯಾಗುವ ಮೂಲಕ ರೈತರ ಆರ್ಥಿಕ ಸಂಕಷ್ಟ ಮತ್ತಷ್ಟು ಹೆಚ್ಚಲಿದೆ. ಕೂಡಲೇ ಕೇಂದ್ರ ಸರ್ಕಾರ ತನ್ನ ನೀತಿಯಲ್ಲಿ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಉಪವಿಭಾಗಾಧಿಕಾರಿ ಕಚೇರಿಯ ತಹಸೀಲ್ದಾರ್ ಯದುಗಿರೀಶ್ ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದರು. ಪ್ರತಿಭಟನೆಯಲ್ಲಿ ತಂಬಾಕು ಬೆಳೆಗಾರರಾದ ತಟ್ಟೆಕೆರೆ ಶ್ರೀನಿವಾಸ, ಕಾಳೇಗೌಡ, ಶ್ರೀಧರ್, ಅಶೋಕ್, ಅಗ್ರಹಾರ ನಂಜುಂಡೇಗೌಡ, ಎಸ್.ಬಿ.ಮೂರ್ತಿ, ಕೆಂಪನಾಯಕ, ಮಹದೇವ್, ಶಿವಶಂಕರ್, ಶಿವರಾಜ್, ಸಣ್ಣೇಗೌಡ, ಸಿದ್ದರಾಮೇಗೌಡ ರವಿಕುಮಾರ್ ಇತರರು ಹಾಜರಿದ್ದರು.