ಹುಣಸೂರು ನಗರದಲ್ಲಿ ತಾಲೂಕು ಮಾದಿಗ ಹೋರಾಟ ಸಮಿತಿ ಸದಸ್ಯರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಎಂ.ಶಿವಣ್ಣ, ರಾಚಯ್ಯ, ಬೆಳ್ತೂರು ವೆಂಕಟೇಶ್, ಮಲ್ಲೇಶ್, ಜೆ.ಮಹದೇವ, ಕಿಟ್ಟು ಇತರರಿದ್ದಾರೆ.  
ಮೈಸೂರು

ಮಾದಿಗ ಹೋರಾಟ ಸಮಿತಿಯಿಂದ ಪ್ರತಿಭಟನೆ

ಪ್ರಜ್ವಲ್.ಎನ್

ಪ್ರಮುಖ ಮುಖ್ಯಾಂಶಗಳು

  • ಒಳಮೀಸಲಾತಿ ಅನುಸರಿಸದೇ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಮುಂದಾಗಿರುವ ಸರ್ಕಾರದ ನಡೆಗೆ ಆಕ್ರೋಶ
ಹುಣಸೂರು: ಒಳಮೀಸಲಾತಿ ಅನುಸರಿಸದೇ 56 ಸಾವಿರ ಸರ್ಕಾರಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ನೀತಿಯನ್ನು ಖಂಡಿಸಿ ಮಾದಿಗ ಹೋರಾಟ ಸಮಿತಿಯ ತಾಲೂಕು ಘಟಕದ ಸದಸ್ಯರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಸಂವಿಧಾನ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಕೈಗೊಂಡು ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿದರು. ದಾರಿಯದ್ದಕ್ಕೂ ರಾಜ್ಯಸರ್ಕಾರ ಮೀಸಲಾತಿ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿ ಘೋಷಣೆಗೆಳನ್ನು ಕೂಗಿದರು.
ನಂತರ ತಾಲೂಕು ಕಚೇರಿಯ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾದಿಗ ಹೋರಾಟ ಸಮಿತಿ ಹಿರಿಯ ಹೋರಾಟಗಾರ ಹಾಗೂ ವಕೀಲ ಅರುಣ್ ಕುಮಾರ್, ರಾಜ್ಯ ಸರ್ಕಾರ ಒಳಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ ಪಡೆದ ದಿನದಂದೇ ಒಳಮೀಸಲಾತಿ ಅನ್ವಯವಾಗದಂತೆ 56432 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲು, ಫೆಬ್ರವರಿ 26ರಂದು ಕರ್ನಾಟಕ ಸರ್ಕಾರದ ಸಚಿವ ಸಂಪುಟವು ತೀರ್ಮಾನ ಕೈಗೊಂಡಿರುವುದು ಅಸಂವಿಧಾನಿಕ ನಡೆಯಾಗಿದೆ. ಅಲ್ಲದೆ ಸಂವಿಧಾನ ಮತ್ತು ಸಾಮಾಜಿಕ ನ್ಯಾಯಕ್ಕೆ ಬಗೆದ ಮಹಾದ್ರೋಹವೆಂದೇ ನಾವು ಪರಿಗಣಿಸಿದ್ದೇವೆ. ಸುದೀರ್ಘ 35 ವರ್ಷಗಳ ಕಾಲ ನಮ್ಮ ಸಾಂವಿಧಾನಿಕ ಹಕ್ಕು ಆಗಿರುವ ಒಳಮೀಸಲಾತಿಗಾಗಿ ಜನತಾಂತ್ರಿಕವಾಗಿ ಹೋರಾಟ ನಡೆಸಿದ ಮಾದಿಗ ಸಮುದಾಯಕ್ಕೆ ಎಸಗಿದ ಘೋರ ಅನ್ಯಾಯವಾಗಿದೆ. ಹಾಗಾಗಿ ಕರ್ನಾಟಕ ರಾಜ್ಯ ಸರ್ಕಾರದ ಈ ಕರಾಳ ತೀರ್ಮಾನವನ್ನು ಸಾಮಾಜಿಕ ನ್ಯಾಯದ ನಿರೀಕ್ಷೆಯಲ್ಲಿರುವ ಮಾದಿಗ ಸಮುದಾಯ ತೀವ್ರವಾಗಿ ಖಂಡಿಸುತ್ತದೆ ಎಂದರು.
ಭಾರತದ ಬಹುತೇಕ ರಾಜ್ಯಗಳು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಜನಸಂಖ್ಯಾ ಅನುಗುಣವಾಗಿ ಸಂವಿಧಾನ ಬದ್ಧವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಿ ಅನುಷ್ಠಾನಗೊಳಿಸಿವೆ. ಕರ್ನಾಟಕದಲ್ಲೂ 2022ರ ಡಿ.20, ರಿಂದ ಪರಿಶಿಷ್ಟ ಜಾತಿ ಶೇ. 17 ಹಾಗೂ ಪರಿಶಿಷ್ಟ ಪಂಗಡ ಶೇ. 7 ಮೀಸಲು ಪ್ರಮಾಣ ಹೆಚ್ಚಳದಂತೆ ಉದ್ಯೋಗಗಳನ್ನು ನೀಡದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಸಮುದಾಯಕ್ಕೆ ದಕ್ಕಬೇಕಾದ ಹುದ್ದೆಗಳನ್ನು ಕಡಿತ ಮಾಡಿದೆ ಎಂದರು.
ರೋಸ್ಟರ್ ಬಿಂದು ಸಮಸ್ಯೆ ಪರಿಹರಿಸಲಿ: ಹಿರಿಯ ಮುಖಂಡ ಪ್ರಸನ್ನ ಚಕ್ರವರ್ತಿ ಮಾತನಾಡಿ, ಸದಾ ಸಂವಿಧಾನ, ಅಂಬೇಡ್ಕರ್ ಹೆಸರನ್ನು ಹೇಳುವ ಸರ್ಕಾರ ತನ್ನ ನೀತಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪಿನಂತೆ ಒಳಮೀಸಲಾತಿ ಜಾರಿಗೊಳಿಸಬೇಕಾದ ಸರ್ಕಾರ ಸಮಷ್ಟಿ ಪ್ರಜ್ಞೆಯಿಂದ ನಡೆಯದೆ ಸರ್ಕಾರವೇ ಮುಂದೆ ನಿಂತು ಒಳ ಮೀಸಲಾತಿಯನ್ನು ನನೆಗುದಿಗೆ ತಳ್ಳುವ ಅನ್ಯಾಯವಸಗುತ್ತಿದೆ. ಗೊಂದಲಕ್ಕೆ ಕಾರಣವಾಗಿರುವ ರೋಸ್ಟರ್ ಬಿಂದುಗಳ ಸಮಸ್ಯೆಗಳಿಗೆ ಪರಿಣಿತರೊಂದಿಗೆ ಸಮಾಲೋಚನೆ ನಡೆಸಿ ಪರಿಹಾರ ರೂಪಿಸುವುದನ್ನು ಬಿಟ್ಟು, ಒಳಮೀಸಲಾತಿಯನ್ನೇ ನಿರಾಕರಿಸಿ ಉದ್ಯೋಗ ನೇಮಕಾತಿಗೆ ಮುಂದಾಗುವುದು ಸರ್ಕಾರದ ವಿವೇಕ ಶೂನ್ಯ ನಡೆಯಾಗಿದೆ. ರಾಜ್ಯ ಸರ್ಕಾರವು ಒಳಮೀಸಲಾತಿಯನ್ನು ವೋಟ್ ಬ್ಯಾಂಕ್ ದೃಷ್ಟಿಯಿಂದ ನೋಡದೆ ಮಾತೃ ಹೃದಯದಿಂದ ನೋಡಬೇಕಾಗಿದೆ, ಆಗ ಮಾತ್ರ ಅಲೆಮಾರಿಗಳ ಸಮಸ್ಯೆಯು ಬಗೆಹರಿಯುತ್ತದೆ. ಇಲ್ಲವಾದರೆ ಚಾರಿತ್ರಿಕ ಪ್ರಮಾದ ಸರ್ಕಾರ ಮತ್ತು ಅದರ ಮುಖ್ಯಸ್ಥರಾದ ಮುಖ್ಯಮಂತ್ರಿಯ ಹೆಗಲಿಗೆ ಅಂಟಿಕೊಳ್ಳುತ್ತದೆ ಎಂದು ಎಚ್ಚರಿಸಿದರು.
ತಾಲೂಕು ಆದಿಜಾಂಬವ ಸಂಘದ ಅಧ್ಯಕ್ಷ ಎಂ.ಶಿವಣ್ಣ, ಜೆ.ಮಹದೇವ್, ಬೆಳ್ತೂರು ವೆಂಕಟೇಶ್, ರಾಯನಹಳ್ಳಿ ಸ್ವಾಮಿ ಮಾತನಾಡಿದರು. ಮಹಿಳಾ ಘಟಕದ ಅಧ್ಯಕ್ಷೆ ಶಿವಮ್ಮ, ತಾಲೂಕು ಗೌರವಾಧ್ಯಕ್ಷ ರಾಚಯ್ಯ, ಮುಖಂಡರಾದ ಕಿಟ್ಟು, ಎಂ.ಮಲ್ಲೇಶ್, ಎಂ.ಶಿವಕುಮಾರ್, ಎಚ್.ಪಿ.ಸತೀಶ್‌ಕುಮಾರ್, ಬಸವರಾಜ ಗುರೂಜಿ, ಮಹದೇವಸ್ವಾಮಿ, ಆರ್.ಮಹದೇವ್, ಹರೀಶ್, ಆಂಜನೇಯ, ಕೆಂಪರಾಮಯ್ಯ, ಸಣ್ಣಮಾದಯ್ಯ, ಶಿವರಾಮು, ಸಂತೋಷ್ ಇತರರು ಇದ್ದರು.
ಉಪವಿಭಾಗಾಧಿಕಾರಿ ಕೆ.ವಿ.ಕಾವ್ಯರಾಣಿ ಮನವಿ ಸ್ವೀಕರಿಸಿದರು.