ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಪ್ರತಿಭಟನೆ
- ಅಡುಗೆ ಅನಿಲ ಸಮಸ್ಯೆಯತ್ತ ಗಮನಹರಿಸಿ
- ಪ್ರಧಾನಿಗೆ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯ
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರವಾಸ ಮಾಡುವುದನ್ನು ಬಿಟ್ಟು, ಅಡುಗೆ ಅನಿಲ ಕೊರತೆಯಿಂದ ಬಳಲುತ್ತಿರುವ ಜನರ ಸಮಸ್ಯೆಗಳ ಕಡೆಯೂ ಗಮನ ಹರಿಸಬೇಕು ಎಂದು ಒತ್ತಾಯಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನಗರದಲ್ಲಿ ಭಾನುವಾರ ವಿನೂತನವಾಗಿ ಪ್ರತಿಭಟಿಸಿದರು.
ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಟಾಂಗಾ ಗಾಡಿಯಲ್ಲಿ ಖಾಲಿ ಸಿಲಿಂಡರ್‌ಗಳನ್ನು ಇಟ್ಟುಕೊಂಡು ಆಟೋ ಎಳೆಯುವ ಮೂಲಕ ಗಮನ ಸೆಳೆದರು. ಗ್ಯಾಸ್ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.
ಎಲ್‌ಪಿಜಿ ಅನಿಲ ಪೂರೈಕೆಯಲ್ಲಿನ ವ್ಯತ್ಯಯದಿಂದ ರಾಜ್ಯಾದ್ಯಂತ ಬಹುತೇಕ ಹೋಟೆಲ್‌ಗಳು ಮುಚ್ಚಿವೆ. ಸಾವಿರಾರು ಜನರು ನೋವಿನಲ್ಲಿದ್ದಾರೆ. ಕಾರ್ಮಿಕರಿಗೆ ಸಂಬಳ ಕೊಡಲು ಅವರಿಗೆ ಆಗುತ್ತಿಲ್ಲ. ಹೋಟೆಲ್ ಬಾಡಿಗೆ ಕಟ್ಟಲು ಸಮಸ್ಯೆ ಆಗಿದೆ. ಜತೆಗೆ, ಈ ಸಮಸ್ಯೆಯಿಂದಾಗಿ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಸಮರ್ಪಕವಾಗಿ ಗ್ಯಾಸ್ ಪೂರೈಕೆಯಾಗದ ಹಿನ್ನೆಲೆ ಆಟೋಗಳು ರಸ್ತೆಗಿಳಿಯುತ್ತಿಲ್ಲ. ಇದರಿಂದ ಪ್ರಯಾಣಿಕರಿಗೂ ತೊಂದರೆ ಆಗಿದೆ ಎಂದು ಕಿಡಿಕಾರಿದರು.
ಕನ್ನಡ ಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ ಸೇರಿದಂತೆ ಇತರರು ಇದ್ದರು.