ತಾಲೂಕಿನ ಹಂಪಾಪುರ ಮತ್ತು ಜಿನ್ನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಕೆ.ಪಿ.ಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲು ಹೊರಟಿರುವ ಸರ್ಕಾರದ ನಡೆ ಖಂಡಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಬುಧವಾರ ಗ್ರಾಮಸ್ಥರು, ಪಾಲಕರು ಹಾಗೂ ವಿದ್ಯಾರ್ಥಿಗಳು ಹಂಪಾಪುರ ಗ್ರಾಮದ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು. 
ಮೈಸೂರು

ಹಂಪಾಪುರ ಗ್ರಾಮಸ್ಥರಿಂದ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಶಾಲೆಯನ್ನು ಕೆ.ಪಿ.ಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಮುಚ್ಚಲು ಹೊರಟಿರುವ ಸರ್ಕಾರದ ನಡೆ ಖಂಡನೆ
ಎಚ್.ಡಿ.ಕೋಟೆ: ಕೆ.ಪಿ.ಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ಹಂಪಾಪುರ ಮತ್ತು ಜಿನ್ನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಮುಚ್ಚಲು ಹೊರಟಿರುವ ಸರ್ಕಾರದ ನಡೆ ಖಂಡಿಸಿ ಎಐಡಿಎಸ್‌ಒ ನೇತೃತ್ವದಲ್ಲಿ ಬುಧವಾರ ಗ್ರಾಮಸ್ಥರು, ಪಾಲಕರು ಹಾಗೂ ವಿದ್ಯಾರ್ಥಿಗಳು ಹಂಪಾಪುರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಮಂಡಲಿ ಸದಸ್ಯೆ ಚಂದ್ರಿಕಾ ಮಾತನಾಡಿ ಹಂಪಾಪುರ ಮತ್ತು ಜಿನ್ನಹಳ್ಳಿಯ ಸರ್ಕಾರಿ ಶಾಲೆಗಳನ್ನು ಹೊಮ್ಮರಗಳ್ಳಿ ಶಾಲೆಗೆ ವಿಲೀನಗೊಳಿಸಲಾಗುತ್ತಿದೆ. ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ ಪ್ರಾಥಮಿಕ ಶಿಕ್ಷಣವು ಒಂದು ಕಿಲೋಮೀಟರ್ ವ್ಯಾಪ್ತಿಯ ಒಳಗೆ ಇರಬೇಕು ಎಂಬುದು ಸರ್ಕಾರದ ನಿಯಮ. ಇದಕ್ಕೆ ವಿರುದ್ಧವಾಗಿ ಸರ್ಕಾರವು ಈ ಶಾಲೆಯನ್ನು ಮುಚ್ಚಿ ಹೊಮ್ಮರಗಳ್ಳಿ ಶಾಲೆಗೆ ವಿಲೀನ ಮಾಡುತ್ತಿರುವುದು ಖಂಡನೀಯ ಎಂದರು.
ಇತ್ತೀಚಿಗೆ ಹೊರಡಿಸಲಾದ ಸರ್ಕಾರದ ಹೊಸ ಆದೇಶವು ಕೌಶಲಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ದೀಪ ಮತ್ತು ಹಣತೆ ಮಾಡಲು, ಅಡಕೆ ಕಾಯಿ ಬಿಡಿಸಲು, ಇತ್ಯಾದಿ..ತರಬೇತಿ ನೀಡುತ್ತಾ ಸರ್ಕಾರಿ ಶಾಲೆ ಮಕ್ಕಳನ್ನು ಉನ್ನತ ಶಿಕ್ಷಣದಿಂದ ದೂರ ಉಳಿಯುವಂತೆ ಹಾಗೂ ಬಡ ಕುಟುಂಬದ ಮಕ್ಕಳನ್ನು ಬಾಲ ಕಾರ್ಮಿಕರಾಗಿಸುವ ಸಂಚನ್ನು ಕಾನೂನಾತ್ಮಕವಾಗಿಯೇ ಕೆ.ಪಿ.ಎಸ್ ಮ್ಯಾಗ್ನೆಟ್ ಯೋಜನೆಯ ಮೂಲಕ ಅನುಷ್ಠಾನಕ್ಕೆ ತರುತ್ತಿರುವುದು ವಿಷಾದನೀಯ ಎಂದು ಆರೋಪಿಸಿದರು.
ಜಿನ್ನಹಳ್ಳಿ ಗ್ರಾಮದ ಮುಖಂಡ ಚಂದ್ರಶೇಖರ್ ಮೂರ್ತಿ ಮಾತನಾಡಿ, ನಮ್ಮ ಊರಿನ ಸರ್ಕಾರಿ ಶಾಲೆ ಮುಚ್ಚಿದರೆ ನಾವು ಸತ್ತಂತೆ. ಒಂದು ವೇಳೆ ಸರ್ಕಾರಿ ಶಾಲೆ ಮುಚ್ಚಿದರೆ ಸರ್ಕಾರ ಮುಂದಿನ ದಿನಗಳಲ್ಲಿ ದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಮ್ಮ ಊರಿನಲ್ಲಿ ಶೇಕಡ 99% ರಷ್ಟು ದುಡಿಯುವ ಜನರು ಇದ್ದಾರೆ, ಸರ್ಕಾರಿ ಶಾಲೆ ಮುಚ್ಚಿದರೆ ನಮ್ಮ ಪರಿಸ್ಥಿತಿ ಏನು ಎಂದು ಆತಂಕ ವ್ಯಕ್ತಪಡಿಸಿದರು.
ಮತ್ತೊಬ್ಬ ಮುಖಂಡ ಮಹದೇವು ಮಾತನಾಡಿ, ಗ್ರಾಮದಲ್ಲಿರುವ ಸರ್ಕಾರಿ ಶಾಲೆಗಳನ್ನ ಮುಚ್ಚಿ ವಿಲೀನ ಮಾಡುವ ಕ್ರಮ ಸರಿಯಲ್ಲ. ಹಳ್ಳಿಯಲ್ಲಿರುವ ಶಾಲೆಗಳಿಗೆ ಮಕ್ಕಳು ನೇರವಾಗಿ ಹೋಗಿ ಮನೆಗೆ ಬರುತ್ತಾರೆ ಈ ವ್ಯವಸ್ಥೆಯನ್ನು ಬದಲಾಯಿಸಿ ಕರ್ನಾಟಕ ಪಬ್ಲಿಕ್ ಶಾಲೆ ಹೆಸರಿನಲ್ಲಿ ಶಾಲೆಗಳನ್ನು ಮುಚ್ಚುವುದು ಖಂಡನೀಯ ಎಂದರು.
ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳಾದ ಅಭಿ,ನೀತುಶ್ರೀ,ಪುಷ್ಪ ಗ್ರಾಮಸ್ಥರಾದ ಚಿನ್ನಯ್ಯ, ಮಹದೇವ, ಜಯಲಕ್ಷ್ಮೀ, ಸುಮಾ, ಮಂಜು, ಶ್ರೀನಿವಾಸ ,ದೇವರಾಜ ,ಮಹೇಂದ್ರ, ಸ್ವಾಮಿ ಇದ್ದರು.