ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪಿರಿಯಾಪಟ್ಟಣ ತಾಲೂಕು ರಸಗೊಬ್ಬರ ಮತ್ತು ಬಿತ್ತನೆ ಬೀಜ, ಕೀಟನಾಶಕಗಳ ಮಾರಾಟಗಾರರ ಸಂಘದಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ನಿಸರ್ಗಪ್ರಿಯ ಹಾಗೂ ಕೃಷಿ ಅಧಿಕಾರಿಗಳಾದ ಹಿತೇಶ್, ಮಹೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮಾನ್ಸೂನ್ ಚಂದ್ರು, ಎಂ.ಎ.ನಾಗೇಶ್, ಸುನಿಲ್ ಇತರರಿದ್ದರು.
ಪಿರಿಯಾಪಟ್ಟಣ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಿರಿಯಾಪಟ್ಟಣ ತಾಲೂಕು ರಸಗೊಬ್ಬರ ಮತ್ತು ಬಿತ್ತನೆ ಬೀಜ, ಕೀಟನಾಶಕಗಳ ಮಾರಾಟಗಾರರ ಸಂಘದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಸಂಘದ ಅಧ್ಯಕ್ಷ ಮಾನ್ಸೂನ್ ಚಂದ್ರು ಮಾತನಾಡಿ, ತಾಲೂಕಿನಲ್ಲಿ 150ಕ್ಕೂ ಹೆಚ್ಚು ಕೃಷಿ ಪರಿಕರ ಮಾರಾಟ ಮಾಡುವ ಅಂಗಡಿಗಳಿದ್ದು, ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದ ನಮಗೆ ಅನ್ಯಾಯವಾಗುತ್ತಿದೆ. ಹಾಗಾಗಿ ಇಂದು ನಾವೆಲ್ಲರೂ ಅಂಗಡಿ, ಮುಂಗಟ್ಟುಗಳನ್ನು ಮುಚ್ಚಿ ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ಮಾಡುತ್ತಿದ್ದೇವೆ ಎಂದರು.
ಸರ್ಕಾರ ಡಿಎಪಿ ಮತ್ತು ಯೂರಿಯಾ ಜತೆಗೆ ಒತ್ತಾಯವಾಗಿ ಬೇರೆ ಉತ್ಪನ್ನಗಳನ್ನು ಖರೀದಿಸುವಂತೆ ಲಿಂಕ್ ಮಾಡುವುದನ್ನು ನಿಲ್ಲಿಸಬೇಕು, ಎಲ್ಲ ರಸಗೊಬ್ಬರಗಳ ಎಂಆರ್‌ಪಿ ಮೇಲೆ ಶೇ.8ರಷ್ಟು ಡೀಲರ್ ಲಾಭಾಂಶ ಇರುವಂತೆ ನೋಡಿಕೊಳ್ಳಬೇಕು, ರಸಗೊಬ್ಬರ, ಬಿತ್ತನೆಬೀಜ, ಕೀಟನಾಶಕ ಮಾದರಿಗಳು ಕಳಪೆ ಬಂದಾಗ ಕಂಪನಿಯ ಮೇಲೆ ಮಾತ್ರ ಪ್ರಕರಣ ದಾಖಲಿಸಬೇಕು ಡೀಲರ್‌ಗಳನ್ನು ಸಾಕ್ಷಿಯಾಗಿ ಮಾತ್ರವೇ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಕಾರ್ಯದರ್ಶಿ ಎಂ.ಎ.ನಾಗೇಶ್ ಮಾತನಾಡಿ, ಅಧಿಕಾರಿಗಳು ತಪಾಸಣೆಗೆಂದು ಅಂಗಡಿಗಳಿಗೆ ಭೇಟಿ ಕೊಟ್ಟ ನಂತರ ಮಾಧ್ಯಮಕ್ಕೆ ಹೇಳಿಕೆ ಕೊಡುವಾಗ ದಾಳಿ ಎಂಬ ಪದ ಮತ್ತು ಅಂಗಡಿಗಳ ಫೋಟೋ ಬಳಸಬಾರದು, ಅಧಿಕಾರಿಗಳು ಮಾರಾಟಗಾರರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದರು.
ಎಫ್‌ಐಡಿ ಮೂಲಕ ರಸಗೊಬ್ಬರ ಮಾರುವ ಸರ್ಕಾರದ ಆದೇಶವನ್ನು ಸ್ವಾಗತಿಸುತ್ತೇವೆ, ನೀರಾವರಿ ಮತ್ತು ಒಣ ಬೇಸಾಯಗಾರರಿಗೆ ವೈಜ್ಞಾನಿಕವಾಗಿ ಬೆಳೆಗಳ ಆಧಾರದ ಮೇಲೆ ರಸಗೊಬ್ಬರ ದೊರೆಯುವಂತೆ ನೋಡಿಕೊಳ್ಳಬೇಕು, ಎಫ್‌ಐಡಿ ಮೂಲಕ ಡಿಎಪಿ ಮತ್ತು ಯೂರಿಯಾ ಮಾರುವುದನ್ನು ಹಿಂಗಾರು ಬೆಳೆಯವರೆಗೆ ಕಡ್ಡಾಯಗೊಳಿಸಬಾರದು ಎಂದು ಕೋರಿದರು.
ಪ್ರತಿಭಟನಾಕಾರರು ತಾಲೂಕು ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ತಹಸೀಲ್ದಾರ್ ನಿಸರ್ಗಪ್ರಿಯ ಹಾಗೂ ಕೃಷಿ ಅಧಿಕಾರಿಗಳಾದ ಹಿತೇಶ್ ಮತ್ತು ಮಹೇಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ವರ್ತಕರ ಸಂಘದ ಅಧ್ಯಕ್ಷ ಬಿ.ಜೆ.ಬಸವರಾಜ್, ಜಿಲ್ಲಾ ನಿರ್ದೇಶಕರಾದ ಕಂಪಲಾಪುರ ಶಶಿಶೇಖರ್, ಪಿ.ಎಸ್.ಕುಮಾರ್, ತಾಲೂಕು ರಸಗೊಬ್ಬರ ಮತ್ತು ಬಿತ್ತನೆ ಬೀಜ, ಕೀಟನಾಶಕಗಳ ಮಾರಾಟಗಾರರ ಸಂಘದ ಉಪಾಧ್ಯಕ್ಷರಾದ ನಂದೀಶ್, ಗೌರೀಶ್, ಖಜಾಂಚಿ ಟಿ.ಕೆ.ಪ್ರಸಾದ್, ನಿರ್ದೇಶಕರಾದ ಸುನಿಲ್, ಅನಿಲ್ ಕುಮಾರ್, ರಾಜೀಕ್ ಅಹಮದ್, ರಮೇಶ್, ಶಿವಾರಾಧ್ಯ, ಸೋಮು, ಕೃಷ್ಣ, ಸದಸ್ಯರಾದ ಕರೀಗೌಡ, ಮಂಜು, ಸಾಧೀಕ್, ಸಲೀಂ, ರಘು, ನವೀನ್, ಹೇಮಂತ್, ಸುದೀರ್, ಚೇತನ್, ದೀಪು, ಜಲೇಂದ್ರ, ಅಣ್ಣೇಗೌಡ, ವಾಸೀಂ, ಗೌತಮ್, ಪೂರ್ಣ ಚಂದ್ರ, ಮಂಜು, ದೃವ, ಕೃಷ್ಣ ನಾಯ್ಕ, ಭರತ್, ಪ್ರತೀಪ್, ಲೋಹಿತ್, ರಕ್ಷಿತ್, ಸೋಮಶೇಖರ್, ಶಿವಣ್ಣ ಮತ್ತಿತರರಿದ್ದರು.