ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದವರ ಬಂಧನ ಖಂಡಿಸಿ ಶನಿವಾರ ಎಐಕೆಕೆಎಂಎಸ್‌ನಿಂದ ಪ್ರತಿಭಟನೆ ನಡೆಯಿತು. ಎಂ.ಶಶಿಧರ್, ಎಚ್.ಎಂ.ಬಸವರಾಜು, ಉಗ್ರನರಸಿಂಹೇಗೌಡ, ಎಸ್.ಎನ್.ಸ್ವಾಮಿ, ಕೆಲ್ಲಹಳ್ಳಿ ರಾಮಣ್ಣ, ಶಿವಣ್ಣ ನಾಯಕ, ಮಹೇಶ್, ರವಿ, ಜಯಲಕ್ಷ್ಮೀ, ಸುಮತಿ ಇತರರು ಇದ್ದರು. 
ಮೈಸೂರು

ಮೊಕದ್ದಮೆ ದಾಖಲಿಸಿರುವುದನ್ನು ಖಂಡಿಸಿ ರೈತ ಕೃಷಿ ಕಾರ್ಮಿಕರ ಸಂಘಟನೆಯಿಂದ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಟನಾಕಾರರನ್ನು ಪೊಲೀಸರು ದೌರ್ಜನ್ಯದಿಂದ ಬಂಧಿಸಿ, ಕೊಲೆ ಯತ್ನ, ಕೊಲೆ ಬೆದರಿಕೆಯಂತಹ ಮೊಕದ್ದಮೆ ಹೂಡಿದ್ದು ಖಂಡನೀಯ
  • ಸಾರ್ವಜನಿಕ ಹಿತಾಸಕ್ತಿಗೆ ಸಂಪೂರ್ಣ ವಿರುದ್ಧವಾಗಿರುವ ಜನ ವಿರೋಧಿ ಇದಾಗಿದೆ
ಮೈಸೂರು: ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದವರ ಮೇಲೆ ಮೊಕದ್ದಮೆ ದಾಖಲಿಸಿರುವುದನ್ನು ಖಂಡಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯಿಂದ ನಗರದ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕಾಲೇಜು ಸ್ಥಾಪನೆಗೆ ಒತ್ತಾಯಿಸಿ ಜ.1ರಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಮನೆ ಮುಂದೆ ಧರಣಿ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ದೌರ್ಜನ್ಯದಿಂದ ಬಂಧಿಸಿದ್ದರು. ಕೊಲೆ ಯತ್ನ, ಕೊಲೆ ಬೆದರಿಕೆಯಂತಹ ಮೊಕದ್ದಮೆ ಹೂಡಿದ್ದು ಖಂಡನೀಯ ಎಂದು ದೂರಿದರು.
ನ್ಯಾಯಯುತ ಹೋರಾಟ ಹತ್ತಿಕ್ಕುವ ಸರ್ಕಾರದ ಹತಾಶ ಕ್ರಮ. ಸಾರ್ವಜನಿಕ ಹಿತಾಸಕ್ತಿಗೆ ಸಂಪೂರ್ಣ ವಿರುದ್ಧವಾಗಿರುವ ಜನ ವಿರೋಧಿ ಇದಾಗಿದೆ. ಪಿಪಿಪಿ ಮಾದರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುತ್ತಿರುವುದು ಸುಲಿಗೆ ಕ್ರಮವಾಗಿದೆ. ಇದನ್ನು ವಿರೋಧಿಸಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ಆಗ್ರಹಿಸಿ ಕಳೆದ 106 ದಿನಗಳಿಂದ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ. ಸರ್ಕಾರದ ಮೇಲೆ ಒತ್ತಡ ತರುವಂತೆ ಸಚಿವ ಎಂ.ಬಿ.ಪಾಟೀಲ್ ಮನೆ ಮುಂದೆ ಧರಣಿ ನಡೆಸುತ್ತಿದ್ದಾಗ ಪೊಲೀಸರು ಅನಾಗರಿಕರಂತೆ ವರ್ತಿಸಿದ್ದಾರೆ ಎಂದು ಕಿಡಿಕಾರಿದರು.
ಜನರಿಗೆ ಲಭ್ಯವಾಗಬೇಕಾದ ಸಾರ್ವಜನಿಕ ಆರೋಗ್ಯ ಸೇವೆಗಾಗಿ ನಡೆಯುತ್ತಿರುವ ಜನಾಂದೋಲನ ಕುಗ್ಗಿಸಲು ಸರ್ಕಾರ ಕೈಗೊಂಡಿರುವ ಕ್ರಮ ಅತ್ಯಂತ ಹೀನ ಮತ್ತು ಅಧಿಕಾರಶಾಹಿಯಾಗಿದೆ. ಜನರನ್ನು ಭಯಭೀತಗೊಳಿಸಿ ಹೋರಾಟ ಇನ್ನಷ್ಟು ವ್ಯಾಪಿಸುವುದನ್ನು ತಡೆಯುವುದೇ ಈ ಬಂಧನದ ಉದ್ದೇಶ ಎಂದರು.
ಹೋರಾಟಗಾರ ಭಗವಾನ್‌ರೆಡ್ಡಿ ಸೇರಿದಂತೆ ಬಂಧಿತರಾಗಿರುವ ಎಲ್ಲ ನಾಯಕರು ಹಾಗೂ ಮಹಿಳಾ ಕಾರ್ಯಕರ್ತರನ್ನು ತಕ್ಷಣ ಬೇಷರತ್ತಾಗಿ ಬಿಡುಗಡೆ ಮಾಡಬೇಕು. ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳಬೇಕು. ಕೂಡಲೇ ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವುದಾಗಿ ಘೋಷಿಸಬೇಕು. ಪಿಪಿಪಿ ಮಾದರಿಯ ಮೆಡಿಕಲ್ ಕಾಲೇಜು ಸ್ಥಾಪನೆಯ ಎಲ್ಲ ಪ್ರಸ್ತಾಪಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಎಐಕೆಕೆಎಂಎಸ್ ರಾಜ್ಯಾಧ್ಯಕ್ಷ ಎಂ.ಶಶಿಧರ್, ಜಿಲ್ಲಾಧ್ಯಕ್ಷ ಎಚ್.ಎಂ.ಬಸವರಾಜು, ಜನಾಂದೋಲನಗಳ ಮಹಾ ಮೈತ್ರಿಯ ಉಗ್ರನರಸಿಂಹೇಗೌಡ, ಮುಖಂಡರಾದ ಎಸ್.ಎನ್.ಸ್ವಾಮಿ, ಕೆಲ್ಲಹಳ್ಳಿ ರಾಮಣ್ಣ, ಶಿವಣ್ಣ ನಾಯಕ, ಮಹೇಶ್, ರವಿ, ಜಯಲಕ್ಷ್ಮೀ, ಸುಮತಿ, ನಾಗರತ್ನ, ಮಂಗಳಮ್ಮ ಇತರರು ಇದ್ದರು.