ವಿಧಾನಮಂಡಲದಲ್ಲಿ ರಾಜ್ಯಪಾಲರನ್ನು ತಡೆದ ಕ್ರಮ ಖಂಡಿಸಿ ಬಿಜೆಪಿಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಎಲ್.ನಾಗೇಂದ್ರ, ಕೆ.ಎನ್.ಸುಬ್ಬಣ್ಣ, ಶಿವಕುಮಾರ್, ಮಿರ್ಲೆ ಶ್ರೀನಿವಾಸ್‌ಗೌಡ, ರಾಕೇಶ್‌ಗೌಡ , ಗೋಕುಲ್ ಗೋವರ್ಧನ್, ಅರುಣ್‌ಕುಮಾರ್‌ಗೌಡ ಇತರರು ಇದ್ದರು. 
ಮೈಸೂರು

ರಾಜ್ಯಪಾಲರನ್ನು ತಡೆದ ಕಾಂಗ್ರೆಸ್ ವಿರುದ್ಧ ಬಿಜೆಪಿಯಿಂದ ಪ್ರತಿಭಟನೆ

ಆರ್.ಕೃಷ್ಣ
ಮೈಸೂರು:ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರನ್ನು ಕಾಂಗ್ರೆಸ್ ಶಾಸಕರು ತಡೆದು ಅಪಮಾನ ಮಾಡುವ ಮೂಲಕ ಗೂಂಡಾಗಳಂತೆ ವರ್ತಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ, ದುಂಡಾವರ್ತನೆ ತೋರಿದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಧಿವೇಶನದಲ್ಲಿ ಆಗಬಾರದು ಆಗಿದೆ. ಕಾಂಗ್ರೆಸ್ ಶಾಸಕರು ರಾಜ್ಯಪಾಲರ ಸಂವಿಧಾನಿಕ ಹುದ್ದೆಗೆ ಅಗೌರವ ತೋರಿಸಿದ್ದಾರೆ. ಬಿ.ಕೆ. ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್‌ನ ಇತರ ಶಾಸಕರಿಗೆ ಸಂವಿಧಾನ ಹುದ್ದೆ ಎಂದು ಗೊತ್ತೇ ಇಲ್ಲ. ಗುಂಡಾ ರಾಜ್ಯ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದು 1980 ದಶಕ ಅಲ್ಲ, ಇದು ವಿಕಸಿತ ಭಾರತ. ಕೂಡಲೇ ರಾಜ್ಯಪಾಲರ ಕ್ಷಮೆಯಾಚಿಸಬೇಕು. ಸಿಎಂ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಬಳ್ಳಾರಿ ಶಾಸಕ ಭರತ್ ರೆಡ್ಡಿ ಹೊಡೆದೇ ತೀರುತ್ತೇನೆ ಎನ್ನುತ್ತಾರೆ. ಭರತ್ ರೆಡ್ಡಿ ಗೂಂಡಾ ರಾಜ್ಯ ಮಾಡಲು ಹೊರಟಿದ್ದಾರೆ. ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ದೂರಿದರು.
ಬಿಜೆಪಿ ನಗರ ಅಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಅಧ್ಯಕ್ಷ ಕೆ.ಎನ್.ಸುಬ್ಬಣ್ಣ, ಮಾಜಿ ಮೇಯರ್ ಶಿವಕುಮಾರ್, ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್‌ಗೌಡ, ಯುವ ಮೋರ್ಚಾ ಅಧ್ಯಕ್ಷ ರಾಕೇಶ್‌ಗೌಡ ಮುಖಂಡರಾದ ಸೋಮಶೇಖರ್, ಚಂದ್ರಶೇಖರ ದಾರಿಪುರ, ಕಾರ್ತಿಕ್ ಮರಿಯಪ್ಪ, ಗೋಕುಲ್ ಗೋವರ್ಧನ್, ಅರುಣ್‌ಕುಮಾರ್‌ಗೌಡ, ರುದ್ರಸ್ವಾಮಿ, ಜೋಗಿ ಮಂಜು, ರಾಕೇಶ್ ಭಟ್ ಇತರರು ಇದ್ದರು.