ಗ್ರಂಥಾಲಯಕ್ಕೆ ಸೌಲಭ್ಯ ಒದಗಿಸುವಂತೆ ಕೋರಿ ಎಐಡಿವೈಒ ಯುವಜನ ಸಂಘಟನೆ ನೇತೃತ್ವದಲ್ಲಿ ಶುಕ್ರವಾರ ಸರಸ್ವತಿಪುರಂನಲ್ಲಿ ಪ್ರತಿಭಟನೆ ನಡೆಯಿತು. ಸುಮಾ, ನೀತುಶ್ರೀ, ಪೂರ್ಣಿಮಾ, ರಸಿಕ್, ಅಶ್ವಿನಿ ಇತರರು ಇದ್ದರು.
- ಸೌಕರ್ಯಗಳಿಲ್ಲದೆ ಓದುಗರು ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ
- ನಗರಪಾಲಿಕೆ ಜನರಿಂದ ಹಣ ವಸೂಲಿ ಮಾಡುತ್ತಿದ್ದು, ಅದನ್ನು ಗ್ರಂಥಾಲಯಗಳ ಅಭಿವೃದ್ಧಿಗೆ ಬಳಸುತ್ತಿಲ್ಲ
- ಬೇರೆ ಕಾಮಗಾರಿಗಳಿಗೆ ನೀಡುವ ಗಮನವನ್ನು ಗ್ರಂಥಾಲಯ ಅಭಿವೃದ್ಧಿಗೆ ಕೊಡುತ್ತಿಲ್ಲ
ಮೈಸೂರು: ಸರಸ್ವತಿಪುರಂನ ಮೂರನೇ ಮುಖ್ಯರಸ್ತೆಯಲ್ಲಿರುವ ಸಾರ್ವಜನಿಕ ಗ್ರಂಥಾಲಯಕ್ಕೆ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಎಐಡಿವೈಒ ಯುವಜನ ಸಂಘಟನೆ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಗ್ರಂಥಾಲಯಕ್ಕೆ ಪ್ರತಿದಿನ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಸೇರಿದಂತೆ ನೂರಾರು ಜನ ಓದಲು ಬರುತ್ತಾರೆ. ಆದರೆ ಇಲ್ಲಿ ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ಓದುಗರು ತುಂಬಾ ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸುಮಾ ದೂರಿದರು.
ಕುಡಿಯಲು ನೀರು, ಶೌಚಗೃಹದ ಇಲ್ಲ. ಇದರಿಂದ ಗಂಡು ಮಕ್ಕಳು ರಸ್ತೆಬದಿ ಬಯಲು ಶೌಚ ಮಾಡಿದರೆ, ಹೆಣ್ಣು ಮಕ್ಕಳು ಮನೆಗಳಿಗೆ ಅಥವಾ ಪಿಜಿಗಳಿಗೆ ಮೊರೆ ಹೋಗುತ್ತಿದ್ದಾರೆ. ಗ್ರಂಥಾಲಯದ ಕಟ್ಟಡ ಕೂಡ ಹಳೆಯದಾಗಿದ್ದು, ಮೇಲ್ಚಾವಣಿಯಿಂದ ಚಕ್ಕೆಗಳು ಬೀಳುತ್ತಿವೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಚೇರುಗಳು ಹಳೆಯ ಕಾಲದವಾಗಿದ್ದು, ಕೆಲವೊಂದು ಮುರಿವೆ, ಈಗ ಹೊಸ ಚೇರುಗಳನ್ನು ಹಾಕಿಸುವ ಅಗತ್ಯವಿದೆ. ಅಧಿಕಾರಿಗಳಿಗೆ ಕೇಳಿದರೆ ತಾವೇನೋ ಪರೋಪಕಾರ ಮಾಡುತ್ತಿರುವಂತೆ ಮಾತನಾಡುತ್ತಾರೆ ಎಂದು ದೂರಿದರು.
ಗ್ರಂಥಾಲಯ ತೆರಿಗೆ ಎಂದು ನಗರಪಾಲಿಕೆ ಜನರಿಂದ ಹಣ ವಸೂಲಿ ಮಾಡುತ್ತಿದ್ದು, ಅದನ್ನು ಗ್ರಂಥಾಲಯಗಳ ಅಭಿವೃದ್ಧಿಗೆ ಬಳಸುತ್ತಿಲ್ಲ. ಬೇರೆ ಕಾಮಗಾರಿಗಳಿಗೆ ತೋರಿಸುವ ಆಸಕ್ತಿಯನ್ನು ಗ್ರಂಥಾಲಯದ ಅಭಿವೃದ್ಧಿ ಕಡೆಗೆ ಇಲ್ಲ. ನಮ್ಮ ಬಳಿ ಹಣ ಇಲ್ಲ ಎನ್ನುತ್ತಾರೆ. ಹಾಗಾದರೆ ನಾವು ಕಟ್ಟುವ ಗ್ರಂಥಾಲಯ ತೆರಿಗೆ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿದರು.
ನಾವು ಬಹಳ ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇವೆ. ಮೊದಲು ತುಂಬಾ ಜನ ಬರುತ್ತಿದ್ದರು. ಈಗ ಸೌಲಭ್ಯ ಕೊರತೆಗಳಿಂದಾಗಿ ಸಂಖ್ಯೆ ಬಹಳ ಕಡಿಮೆಯಾಗಿದೆ. ಹಾಗಾಗಿ ಕೊರತೆಗಳನ್ನು ನೀಗಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ನೀತುಶ್ರೀ, ಪೂರ್ಣಿಮಾ, ರಸಿಕ್, ಅಶ್ವಿನಿ ಇತರರು ಇದ್ದರು.