ಹುಣಸೂರು ನಗರದಲ್ಲಿ ರೈತಸಂಘದ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಟನೆ ಕುರಿತಾದ ಕರಪತ್ರವನ್ನು ಗಣ್ಯರು ಬಿಡುಗಡೆಗೊಳಿಸಿದರು. ಹೊಸೂರುಕುಮಾರ್, ಅತ್ತಿಗುಪ್ಪೆ ರಾಮಕೃಷ್ಣ, ಅಗ್ರಹಾರ ರಾಮೇಗೌಡ, ವಿಷಕಂಠಪ್ಪ, ಬೆಂಕಿಪುರ ಚಿಕ್ಕಣ್ಣ, ಈಶ್ವರ್ ಇತರರಿದ್ದಾರೆ. 
ಮೈಸೂರು

ಖಾಸಗೀಕರಣ ವಿರೋಧಿಸಿ ನಾಳೆ ಪ್ರತಿಭಟನೆ

ರವಿಕುಮಾರ್ ಪಿ. ಕೆ

ಪ್ರಮುಖ ಮುಖ್ಯಾಂಶಗಳು

  • ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾಹಿತಿ
ಹುಣಸೂರು: ರಾಜ್ಯದಲ್ಲಿ ವಿದ್ಯುತ್ ವಿತರಣಾ ಪರವಾನಗಿಯನ್ನು ಖಾಸಗಿ ಪವರ್ ಕಂಪನಿಗೆ ನೀಡುವ ಮೂಲಕ ಸರ್ಕಾರ ಖಾಸಗೀಕರಣಗೊಳಿಸದಂತೆ ಆಗ್ರಹಿಸಿ ಜೂ.18ರಂದು ಹುಣಸೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ತಿಳಿಸಿದರು.
125 ವರ್ಷಗಳ ಹಿಂದೆ ರಾಜ್ಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ವಿದ್ಯುತ್‌ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಸರ್ಕಾರ ಮತ್ತು ವಿದ್ಯುತ್ ಪೂರೈಕೆ ಮತ್ತು ನಿಗಮದ ಜತೆ ರೈತರ ಸಂಘರ್ಷ, ಸಂವಾದ, ಹೋರಾಟ ಎಲ್ಲವೂ ಸತತವಾಗಿ ನಡೆದಿದ್ದರೂ, ಹಾಲಿ ನಿಗಮವು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದೆ. ಆಡಳಿತಾತ್ಮಕ ಸುಧಾರಣೆಗೆ ರೈತರ ವಿರೋಧವಿಲ್ಲ. ಆದರೆ ಇಡೀ ಸಂಸ್ಥೆಯನ್ನೇ ಖಾಸಗಿಯವರಿಗೆ ಸರ್ಕಾರ ನೀಡಲು ಹೊರಟಿರುವುದು ರೈತರನ್ನು ಸಂಕಷ್ಟಕ್ಕೀಡು ಮಾಡಲಿದೆ. ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಇಂತಹ ಪ್ರಯತ್ನಗಳು ನಡೆದು ವರ್ಷದೊಳಗೆ ವಿಫಲವಾದ ಉದಾರಣೆಗಳು ನಮ್ಮ ಮುಂದಿರುವಾಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕರ್ನಾಟಕದಲ್ಲೂ ಜಾರಿಗೊಳಿಸಲು ಮುಂದಾಗಿರುವುದು ಖಂಡನೀಯವೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿಗಮವು ಖಾಸಗಿ ವ್ಯಕ್ತಿಗಳ ಪಾಲಾದರೆ ರೈತರಿಗೆ ಉಚಿತ ವಿದ್ಯುತ್ ಸಿಗಲಾರದು. ಯೂನಿಟ್ ದರದಲ್ಲಿ ಲಂಗುಲಗಾಮಿಲ್ಲದೆ ಏರಲಿದೆ. ಒಂದು ಪಂಪ್‌ಸೆಟ್ ಹೊಂದಿರುವ ಅಚ್ಚುಕಟ್ಟು ಪ್ರದೇಶವನ್ನು ರೈತರು ತಮ್ಮ ಸ್ವಂತ ಖರ್ಚಿನಿಂದ ಪಂಪ್‌ಸೆಟ್ ಹಾಕಿಸಿಕೊಂಡು ಅನ್ನ ನೀಡುತ್ತಾರೆ. ಇದೇ ಭೂಮಿಯನ್ನು ಸರ್ಕಾರ ಅಭಿವೃದ್ಧಿಪಡಿಸಲು ಕನಿಷ್ಠ 7 ಲಕ್ಷ ರೂ. ಖರ್ಚಾಗುತ್ತದೆ ಎಂದು ತಿಳಿಸಿದರು.
ರೈತಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಗೌರವಾಧ್ಯಕ್ಷ ವಿಷಕಂಠಪ್ಪ, ದಲಿತ ಮುಖಂಡ ಅತ್ತಿಕುಪ್ಪೆ ರಾಮಕೃಷ್ಣ, ಈಶ್ವರ್ ಇತರರು ಇದ್ದರು. ಇದೇ ವೇಳೆ ಖಾಸಗೀಕರಣ ವಿರೋಧಿಸಿ ನಡೆಯಲಿರುವ ಪ್ರತಿಭಟನೆ ಕುರಿತಾದ ಕರಪತ್ರವನ್ನು ಗಣ್ಯರು ಬಿಡುಗಡೆಗೊಳಿಸಿದರು.
ಆರ್‌ಆರ್ ನಂಬರ್‌ನೊಂದಿಗೆ ಬನ್ನಿರಿ: ಪ್ರತಿಭಟನೆ ನಡೆಯುವ ದಿನ ರೈತರು ತಮ್ಮ ಪಂಪ್‌ಸೆಟ್ ಸಂಪರ್ಕದ ಆರ್‌ಆರ್ ಸಂಖ್ಯೆಯನ್ನು ಬರೆದುಕೊಂಡು ಬರಬೇಕು. ಸರ್ಕಾರಕ್ಕೆ ನೀಡುವ ಮನವಿಯ ಫಾರ್ಮ್‌ನಲ್ಲಿ ಪ್ರತಿಯೊಬ್ಬ ರೈತರ ಆರ್‌ಆರ್ ನಂಬರ್ ದಾಖಲಿಸಿ ಸಹಿ ಪಡೆಯಲಾಗುವುದು. ಹಾಗಾಗಿ ರೈತರು ಕಡ್ಡಾಯವಾಗಿ ಆರ್ ಆರ್ ಸಂಖ್ಯೆಯನ್ನು ನೀಡಬೇಕೆಂದು ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ ಕೋರಿದರು.