ನಗರದ ಚಾಮಲಾಪುರಹುಂಡಿ ಗ್ರಾಮದಲ್ಲಿ ಕೋರ್ಟ್ ತಡೆಯಾಜ್ಞೆ ನೀಡಿದರೂ ನಗರಸಭಾ ಅಧಿಕಾರಿಗಳು ಡಕ್ ನಿರ್ಮಿಸಲು ಮುಂದಾದಾಗ ಜಾಗದ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು. 
ಮೈಸೂರು

ನಗರಸಭೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

ನಾಗೇಶ ಎಸ್
ನಂಜನಗೂಡು: ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಖಾಸಗಿ ಜಾಗದಲ್ಲಿ ಡಕ್ ನಿರ್ಮಾಣ ಮಾಡಲು ಬಂದ ನಂಜನಗೂಡು ನಗರಸಭಾ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಶನಿವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಚಾಮಲಾಪುರ ಹುಂಡಿ ಗ್ರಾಮದ ಸರ್ವೆ ನಂ. 220ರ ಮರಮ್ಮ ಎಂಬುವವರಿಗೆ ಸೇರಿದ 2.15 ಗುಂಟೆ ಜಮೀನಿನ ಮೇಲೆ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲು ನಗರಸಭೆ ಆಯುಕ್ತರು ಮತ್ತು ಅಧಿಕಾರಿಗಳು ಮುಂದಾಗಿದ್ದರು. ಇದನ್ನು ಪ್ರಶ್ನಿಸಿ ನಂಜನಗೂಡಿನ ಸಿವಿಲ್ ನ್ಯಾಯಾಲಯದಲ್ಲಿ ಮರಮ್ಮ ದಾವೆ ಹೂಡಿದ್ದರು. ನ್ಯಾಯಾಲಯದಿಂದ ತಡೆಯಾಜ್ಞೆ ನೀಡಲಾಗಿದೆ.
ಆದರೂ ನಗರಸಭೆ ಆಯುಕ್ತ ಎಂ.ಬಸವರಾಜು, ಇಂಜಿನಿಯರ್ ಮಹೇಶ್ ಕುಮಾರ್ ಮತ್ತು ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿ ಜತೆಗೂಡಿ ಏಕಾಏಕಿ ಬಂದು ನಮ್ಮ ಖಾಸಗಿ ಜಮೀನಿನ ಮೇಲೆ ರಸ್ತೆ ನಿರ್ಮಾಣಕ್ಕಾಗಿ ಡಕ್ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿ ನಗರಸಭಾ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಕೆಲವು ಸಮಯ ಅಧಿಕಾರಿಗಳ ಜತೆ ಮಾತಿನ ಚಕಮಕಿ ನಡೆಯಿತು.
ನಮ್ಮ ಜಮೀನ ಮೇಲೆ ರಸ್ತೆ ಮಾಡುತ್ತಿದ್ದಾರೆ. ಸರ್ಕಾರಿ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡಿರುವವರನ್ನು ಯಾರೂ ಕೇಳುತ್ತಿಲ್ಲ. ಪೊಲೀಸರನ್ನು ಕರೆದುಕೊಂಡು ಬಂದು ನಮಗೆ ದಬ್ಬಾಳಿಕೆ ಮಾಡುತ್ತಿದ್ದಾರೆ. ನಮ್ಮ 2.15 ಗುಂಟೆ ಜಮೀನನ್ನು ಅಳತೆ ಮಾಡಲು ಬಿಡುತ್ತಿಲ್ಲ. ರಾಜಕೀಯ ಮುಖಂಡ ನಮ್ಮ ಮೇಲೆ ಉದ್ದೇಶಪೂರ್ವಕವಾಗಿ ಅಧಿಕಾರಿಗಳನ್ನು ಕರೆದುಕೊಂಡು ಬಂದು ಈ ರೀತಿ ತೊಂದರೆ ಕೊಡುತ್ತಿದ್ದಾರೆ. ಪದೇ ಪದೆ ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ.
ಇದೇ ರೀತಿ ಮುಂದುವರಿದರೆ ನಾವು ಆತ್ಮಹತ್ಯೆ ದಾರಿ ಹಿಡಿಯಬೇಕಾಗುತ್ತದೆ. ಕೂಡಲೇ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಬೇಕು. ಇಲ್ಲವಾದಲ್ಲಿ ನಗರ ಸಭೆ ಕಾರ್ಯಾಲಯ ಮತ್ತು ಪೊಲೀಸ್ ಠಾಣೆ ಮುಂದೆ ಹೋರಾಟ ನಡೆಸಬೇಕಾಗುತ್ತದೆ ಎಂದು ಗಂಗಾಧರ್ ಸ್ವಾಮಿ, ಮಂಜುನಾಥ್, ರತ್ನಮ್ಮ, ಆನಂದ್, ರಾಜಮಣಿ, ಪ್ರದೀಪ್ ಎಚ್ಚರಿಕೆ ನೀಡಿದ್ದಾರೆ.