ಭೂಸ್ವಾಧೀನ ಪ್ರಕ್ರಿಯೆ ಖಂಡಿಸಿ ನಂಜನಗೂಡು ತಾಲೂಕಿನ ಮುದ್ದಹಳ್ಳಿ ಗೇಟ್ ಬಳಿ ರೈತ ಸಂಘಟನೆ ಹಾಗೂ ಮುದ್ದಹಳ್ಳಿ, ಎಲೆಚಗೆರೆ, ಸಿಂಧುವಳ್ಳಿಪುರ ಗ್ರಾಮಸ್ಥರು ಮೈಸೂರು-ಊಟಿ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. 
ಮೈಸೂರು

ಭೂಸ್ವಾಧೀನ ಪ್ರಕ್ರಿಯೆ ಖಂಡಿಸಿ ಪ್ರತಿಭಟನೆ

ನಾಗೇಶ ಎಸ್
ನಂಜನಗೂಡು: ಮುದ್ದಹಳ್ಳಿ, ಸಿಂಧುವಳ್ಳಿಪುರ, ಎಲಚಗೆರೆ ಸುತ್ತಮುತ್ತ 448 ಎಕರೆ ಫಲವತ್ತಾದ ಜಮೀನನ್ನು ಕೆಐಎಡಿಬಿ ಭೂ ಸ್ವಾಧೀನ ಪಡಿಸಿಕೊಂಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ಮುದ್ದಹಳ್ಳಿ ಗೇಟ್ ಬಳಿಯ ಮೈಸೂರು-ಊಟಿ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ತಡೆದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, 2003ರಲ್ಲಿ ಸರ್ಕಾರ ಮುದ್ದಹಳ್ಳಿ ಸುತ್ತಮುತ್ತಲಿನ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಗೆ ಒಳಪಡಿಸಿದ್ದು, 19 ವರ್ಷಗಳಿಂದ ಪ್ರಕ್ರಿಯೆ ನಿಲ್ಲಬೇಕಾಗಿತ್ತು. ಆದರೆ ಕೆಲವು ರಾಜಕಾರಣಿಗಳು ಸಂವಿಧಾನ ಬಾಹಿರವಾಗಿ ಭೂಮಿ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಮುಖ್ಯಮಂತ್ರಿ, ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಬೇಕು. ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು. ಒಂದು ವಾರ ಗಡುವು ನೀಡಲಾಗಿದ್ದು, ಪ್ರಕ್ರಿಯೆ ಕೈ ಬಿಡದಿದ್ದರೆ ಎಲ್ಲ ಜಿಲ್ಲೆಗಳಲ್ಲೂ ರಸ್ತೆ ಸಂಚಾರ ತಡೆ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಮಂಜು ಕಿರಣ್ ಮಾತನಾಡಿ, ಮೈಸೂರು ಹಾಗೂ ನಂಜನಗೂಡು ಭಾಗದಲ್ಲಿ ರೈತರ ಜಮೀನುಗಳನ್ನು ಖರೀದಿಸಿ ರಿಯಲ್ ಎಸ್ಟೇಟ್ ಮಾಡಲು ರಾಜಕಾರಣಿಗಳು ಕುತಂತ್ರ ಮಾಡುತ್ತಿದ್ದಾರೆ. ರೈತರಿಗೆ ಕೆಲಸ ಕೊಡುವ ಸುಳ್ಳು ಭರವಸೆ ನೀಡಿ ಮೋಸ ಮಾಡುವ ತಂತ್ರ ಇದಾಗಿದೆ. ಈಗಾಗಲೇ ಇಮ್ಮಾವು, ಕಡೆಕೊಳ ಭಾಗಗಳಲ್ಲಿ ರೈತರು ಜಮೀನು ಮಾರಿ ಬೀದಿಗೆ ಬಂದಿದ್ದಾರೆ. ಇಲ್ಲಿನ ಜನ ಯಾವುದೇ ಕಾರಣಕ್ಕೂ ಭೂಮಿ ಮಾರುವುದಿಲ್ಲ. ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡುವವರೆಗೂ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಡಾ. ಸ್ಮಿತಾ ರಾಮು ಭೇಟಿ ನೀಡಿ, ರೈತರ ಸಮಸ್ಯೆ ಆಲಿಸಿದರು. ಬಳಿಕ ಮಾತನಾಡಿದ ಅವರು, ಈ ಸಂಬಂಧ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಸಿರಮಳ್ಳಿ ಮಂಜುನಾಥ್, ರೈತರಾದ ವಿಜಯಲಕ್ಷ್ಮೀ, ಗುರುಸ್ವಾಮಿ, ಗೌಡಕೆ ಪ್ರಕಾಶ್, ಮಲ್ಲಿಕಾರ್ಜುನ, ವೆಂಕಟೇಶ್, ವೇಣು, ಡೇರಿ ನಂದೀಶ್, ಅಂಬೇಡ್ಕರ್ ಸಂಘದ ರವಿ, ಕುಮಾರ್, ರಂಗಸ್ವಾಮಿ, ರಾಜು, ನಂದೀಶ್, ನಾಗಯ್ಯ, ಚಿಕ್ಕಂಡಯ್ಯ, ಮಹದೇವಯ್ಯ, ಸೇರಿದಂತೆ ಮಹಿಳಾ ಸಂಘಟನೆ ಸದಸ್ಯರು ಪಾಲ್ಗೊಂಡಿದ್ದರು.