ಪಿಣರಾಯಿ ವಿಜಯನ್ ಅವರ ನಿವಾಸದ ಮೇಲಿನ ಇಡಿ ದಾಳಿ ಖಂಡಿಸಿ ಸಿಪಿಎಂ (ಎಂ) ಕಾರ್ಯಕರ್ತರು ನಗರದಲ್ಲಿ ಪ್ರತಿಭಟಿಸಿದರು. ಜಗದೀಶ್ ಸೂರ್ಯ, ಜಿ. ಜಯರಾಮ್, ಎನ್.ವಿಜಯ್ ಕುಮಾರ್, ಶಾಕುಂತಲಾ, ಎನ್.ಸುಬ್ರಹ್ಮಣ್ಯ ಇನ್ನಿತರರಿದ್ದರು. 
ಮೈಸೂರು

ಪಿಣರಾಯಿ ವಿಜಯನ್ ನಿವಾಸದ ಮೇಲೆ ಐಟಿ ದಾಳಿಗೆ ಖಂಡಿಸಿ ಪ್ರತಿಭಟನೆ

ಮಂಜುನಾಥ ತಿಮ್ಮಯ್ಯ

ಪ್ರಮುಖ ಮುಖ್ಯಾಂಶಗಳು

  • ಭಾರತ ಕಮ್ಯುನಿಸ್ಟ್ ಪಕ್ಷ ಪ್ರತಿಭಟನೆ
  • ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
ಮೈಸೂರು: ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿವಾಸದ ಮೇಲಿನ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ ವಾದಿ) ಕಾರ್ಯಕರ್ತರು ನಗರದ ರಾಮಸ್ವಾಮಿ ವೃತ್ತದಲ್ಲಿ ಗುರುವಾರ ಸಂಜೆ ಪ್ರತಿಭಟಿಸಿದರು.
ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ನಡೆಸಿರುವ ಈ ದಾಳಿ ಖಂಡನೀಯ. ಇದು ರಾಜಕೀಯ ಪ್ರೇರಿತ ಮತ್ತು ದ್ವೇಷದ ರಾಜಕಾರಣದ ಪರಮಾವಧಿಯಾಗಿದೆ. ಎಕ್ಸಾಲಾಜಿಕ್ ಪ್ರಕರಣಕ್ಕೂ ಪಿಣರಾಯಿ ವಿಜಯನ್ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಾಲಯಗಳು ಪದೇ ಪದೇ ಅವಲೋಕಿಸಿವೆ. ಆದರೂ ಅವರ ವಿರುದ್ಧದ ರಾಜಕೀಯ ದಾಳಿ ಅವಿರತವಾಗಿ ಮುಂದುವರಿದಿದೆ. ಈಗ ಅವರು ವೀಣಾ ಅವರ ತಂದೆ ಎಂಬ ಒಂದೇ ಕಾರಣಕ್ಕಾಗಿ ಅವರನ್ನು ಗುರಿ ಮಾಡಲಾಗುತ್ತಿದೆ ಎಂದು ದೂರಿದರು.
ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ದೆಹಲಿಯಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿದ ತಕ್ಷಣವೇ ಇಂತಹದೊಂದು ಕ್ರಮ ಕೈಗೊಂಡಿರುವುದು ಗಂಭೀರ ಪ್ರಶ್ನೆ ಹುಟ್ಟು ಹಾಕಿದೆ. ಇದು ರಾಜಕೀಯವಾಗಿ ಯೋಜಿತ ನಾಟಕದಂತೆ ಕಾಣುತ್ತದೆ. ರಾಜಕೀಯ ಲಾಭಕ್ಕಾಗಿ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
 ವಿರೋಧ ಪಕ್ಷದ ನಾಯಕರನ್ನು ಆಯ್ದು ಗುರಿಪಡಿಸುತ್ತಿರುವುದು ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ದಾಳಿ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಜಿಲ್ಲಾ ಸಮಿತಿ ಸದಸ್ಯರಾದ ಜಿ. ಜಯರಾಮ್, ಎನ್.ವಿಜಯ್ ಕುಮಾರ್, ಶಾಕುಂತಲ, ಸ್ಥಳೀಯ ಸಮಿತಿ ಕಾರ್ಯದರ್ಶಿ ಎನ್.ಸುಬ್ರಹ್ಮಣ್ಯ, ಸದಸ್ಯರಾದ ರಾಜೇಂದ್ರ, ಅಣ್ಣಪ್ಪ, ಬಸವಯ್ಯ, ಶಶಿಕುಮಾರ್, ಬೀರೇಶ್ವರ್, ಬಲರಾಮ್, ಬಾಲಾಜಿ ರಾವ್, ರಘು ಪೂಜಾರಿ, ಈಶ್ವರ್, ಸೋಮಶಂಕರ್, ಶ್ರೀಧರ್, ಆರ್. ಸುಬ್ರಹ್ಮಣ್ಯ ಇದ್ದರು