ಮೈಸೂರು ಕನ್ನಡ ವೇದಿಕೆ ವತಿಯಿಂದ ಶನಿವಾರ ನಗರ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು. 
ಮೈಸೂರು

ಇ-ಖಾತಾ ವಿಳಂಬ ಖಂಡಿಸಿ ಪ್ರತಿಭಟನೆ

ಅವಿನಾಶ್ ಜೈನಹಳ್ಳಿ
ಮೈಸೂರು: ನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಇ-ಖಾತಾ ವಿಳಂಬ ಖಂಡಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಶನಿವಾರ ನಗರ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಸ್ಥಳೀಯ ಸಂಸ್ಥೆಗಳು, ಮಹಾನಗರ ಪಾಲಿಕೆ ಕಚೇರಿಗಳಲ್ಲಿ ಸಾರ್ವಜನಿಕರು ಇ-ಖಾತೆ ಪಡೆಯಲು ಸಾಧ್ಯವಾಗುತ್ತಿಲ್ಲ. ತೆರಿಗೆ, ಮನೆ ಕಂದಾಯ ದಾಖಲಾತಿಗಳನ್ನು ಸಲ್ಲಿಸಿದರೂ, ಸ್ಥಳೀಯ ಸಂಸ್ಥೆಗಳ ನಿರುತ್ಸಾಹ, ಬೇಜವಾಬ್ದಾರಿ, ನಿರ್ಲಕ್ಷೃದಿಂದ ತುಂಬ ವಿಳಂಬವಾಗುತ್ತಿದೆ. ರಾಜ್ಯ ಸರ್ಕಾರ ಅಭಿವೃದ್ಧಿ ದೃಷ್ಟಿಯಿಂದ ಬೆಂಗಳೂರು ಹಾಗೂ ಮೈಸೂರು ಪಾಲಿಕೆಯನ್ನು ಗ್ರೇಟರ್ ಪಾಲಿಕೆಗಳಾಗಿ ಮಾಡುತ್ತಿದ್ದರೆ, ಗ್ರೇಟರ್ ಮೈಸೂರು ಅಸ್ತಿತ್ವಕ್ಕೆ ಬರುವ ಮುನ್ನವೇ ಇ-ಖಾತಾ ವರ್ಗಾವಣೆ, ನೋಂದಣಿ ಸಮಸ್ಯೆಯಾಗುತ್ತಿರುವುದು ವಿಪರ್ಯಾಸ ಎಂದು ಕಿಡಿ ಕಾರಿದರು.
ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಬೃಹತ್ ನಗರಪಾಲಿಕೆ ನಿರ್ವಹಿಸಲು ಸಾಧ್ಯವೆ ಎಂಬ ಪ್ರಶ್ನೆ ಮೂಡುತ್ತದೆ. ನಿದ್ರಾವಸ್ಥೆ ಹಾಗೂ ಜಡತ್ವವಿರುವ, ದಿನನಿತ್ಯ ಸರ್ವರ್ ಸಮಸ್ಯೆಯ ಕಗ್ಗಂಟನ್ನು ನಿವಾರಿಸದೆ ಜನಸಾಮಾನ್ಯರಿಗೆ ತ್ವರಿತವಾಗಿ ಸೇವೆ ನೀಡಲು ಸಾಧ್ಯವಿಲ್ಲ. ಹಣ ಕಟ್ಟುವ ಸಂದರ್ಭದಲ್ಲಿ ಸರ್ವರ್ ಸರಿಯಿರುತ್ತದೆ. ದುರಂತವೆಂದರೆ ಇ-ಖಾತಾ ಪಡೆಯುವ ಸಮಯದಲ್ಲಿ ಸಿಬ್ಬಂದಿ ಸರ್ವರ್ ಸಮಸ್ಯೆಯೆಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ. ಇದು ಸರ್ವರ್ ಸಮಸ್ಯೆಯೋ, ಇಲ್ಲ ಅಧಿಕಾರಿಗಳ ನಿರ್ಲಕ್ಷೃವೋ ತಿಳಿಯಬೇಕಿದೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಸರಿಪಡಿಸಿ ಸಾರ್ವಜನಿಕರಿಗೆ ಸುಗಮವಾಗಿ ಸೇವೆಗಳು ದೊರೆಯುವಂತೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಪ್ಯಾಲೇಸ್ ಬಾಬು, ಚಾಮರಾಜು ಮಂಡಕಳ್ಳಿ, ಬೀಡಾ ಬಾಬು, ಎಲ್‌ಐಸಿ ಸಿದ್ದಪ್ಪ, ಹರೀಶ್, ಸುನೀಲ್, ಚಿನ್ನಪ್ಪ, ಶಿವಗೌಡ, ರಮೇಶ್ ಇತರರಿದ್ದರು.