ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಯೋಗಕ್ಷೇಮಾಭಿವೃದ್ಧಿ ಸಂಘದಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಎಸ್.ನಾಗರಾಜ್, ಆರ್.ಪ್ರಭಾಕರ್, ಕೆ.ಟಿ.ದಿವಾಕರ್, ಚಂದ್ರಶೇಖರ್ ಸ್ವಾಮಿ ಇನ್ನಿತರರಿದ್ದರು. 
ಮೈಸೂರು

ಡಿಎಲ್ ನೀಡಲು ವಿಳಂಬ ವಿರೋಧಿಸಿ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಪಶ್ಚಿಮ ಆರ್‌ಟಿಒ ಕಚೇರಿ ಎದುರು ಆಕ್ರೋಶ
  • ಅವ್ಯವಸ್ಥೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಆಗ್ರಹ
ಮೈಸೂರು: ಚಾಲಕರ ಡಿಎಲ್ ನೀಡುವಲ್ಲಿ ಅನಗತ್ಯ ವಿಳಂಬ ಮತ್ತು ವಾಹನ ಸಂಬಂಧಿತ ಸೇವೆಯಲ್ಲಿ ಆಗುತ್ತಿರುವ ಅವ್ಯವಸ್ಥೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಯೋಗಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಟನೆ ನಡೆಯಿತು.
ನಗರದ ಸರಸ್ವತಿಪುರಂನಲ್ಲಿರುವ ಪಶ್ಚಿಮ ಆರ್‌ಟಿಒ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು.
ಚಾಲಕರು ತಿಂಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದರೂ ಚಾಲನಾ ಪರವಾನಿಗೆ (ಡಿಎಲ್) ಪ್ರಮಾಣಪತ್ರ ವಿತರಿಸಿಲ್ಲ. ಈ ರೀತಿಯ ಅನಗತ್ಯ ವಿಳಂಬದಿಂದ ಚಾಲಕರ ಜೀವನೋಪಾಯಕ್ಕೆ ಅಡಚಣೆ ಉಂಟಾಗಿದೆ. ಮೈಸೂರಿನವರು ಬೇರೆ ಜಿಲ್ಲೆಗೆ ಹೋಗಿ ಡಿಎಲ್ ಮಾಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಡಿಎಲ್ ನವೀಕರಣ, ವಾಹನಗಳ ಎಫ್‌ಸಿ, ವಾಹನಗಳ ದಾಖಲಾತಿ ವರ್ಗಾವಣೆ, ಸಿಸಿ ಪಡೆಯಲೂ ಸಾಧ್ಯವಾಗುತ್ತಿಲ್ಲ. ವಾಹನಗಳ ಆರ್‌ಸಿ ಕಾರ್ಡ್ ನೀಡುತ್ತಿಲ್ಲ. ಎಮಿಷನ್ ಟೆಸ್ಟ್ ಮಾಡಿಸಲು ತೊಂದರೆ ಆಗುತ್ತಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸರ್ವರ್, ಅಪ್‌ಡೇಟ್ ಸಮಸ್ಯೆ ಸೃಷ್ಟಿಯಾಗುತ್ತಿದೆ. 
ಜತೆಗೆ, ಈ ರೀತಿಯ ಅಧಿಕಾರಿಗಳ ಧೋರಣೆ ಸಾರ್ವಜನಿಕ ಸೇವೆಯ ನಿಯಮಗಳಿಗೆ ವಿರುದ್ಧವಾಗಿದೆ. ಇದರಿಂದ ವಾಹನ ಮಾಲೀಕರು, ಚಾಲಕರು ಆರ್ಥಿಕ, ವೃತ್ತಿಸಂಬಂಧಿತ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು. 
ಸಂಘದ ಎಸ್.ನಾಗರಾಜ್, ಆರ್.ಪ್ರಭಾಕರ್, ಕೆ.ಟಿ.ದಿವಾಕರ್, ಚಂದ್ರಶೇಖರ್ ಸ್ವಾಮಿ ಇನ್ನಿತರರಿದ್ದರು.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ  ಜಿಲ್ಲಾ ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಯೋಗಕ್ಷೇಮಾಭಿವೃದ್ಧಿ ಸಂಘದಿಂದ ನಗರದಲ್ಲಿ  ಪ್ರತಿಭಟನೆ ನಡೆಯಿತು. ಎಸ್.ನಾಗರಾಜ್, ಆರ್.ಪ್ರಭಾಕರ್, ಕೆ.ಟಿ.ದಿವಾಕರ್, ಚಂದ್ರಶೇಖರ್ ಸ್ವಾಮಿ ಇನ್ನಿತರರಿದ್ದರು.