ತಿ.ನರಸೀಪುರದಲ್ಲಿರುವ ರೇಷ್ಮೆ ನೂಲು ತೆಗೆಯುವ ಕಾರ್ಖಾನೆಯ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆಯಿಂದ ಪ್ರತಿಭಟನೆ ನಡೆಯಿತು.
- ಕರ್ನಾಟಕ ಸೇನಾ ಪಡೆ ಪ್ರತಿಭಟನೆ
- ಕ್ರೀಡಾಂಗಣ ನಿರ್ಮಾಣಕ್ಕೆ ಖಂಡನೆ
- ಜಿಲ್ಲಾಧಿಕಾರಿ ಕಚೇರಿ ಎದುರು ಆಕ್ರೋಶ
ಮೈಸೂರು: ತಿ.ನರಸೀಪುರದಲ್ಲಿರುವ ರೇಷ್ಮೆ ನೂಲು ತೆಗೆಯುವ ಕಾರ್ಖಾನೆಯ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ 1912ರಲ್ಲಿ ಸುಮಾರು 13 ಎಕರೆ ಜಾಗದಲ್ಲಿ ಮೈಸೂರು ರೇಷ್ಮೆ ಕಾರ್ಖಾನೆಯನ್ನು ಸ್ಥಾಪಿಸಿದರು. ಇಲ್ಲಿ ಸುಮಾರು 5 ಎಕರೆ ಜಾಗದಲ್ಲಿ 60-70 ವರ್ಷಗಳ ಹಳೆಯದಾದ ಸುಮಾರು 550 ಬೃಹತ್ ಮರಗಳಿವೆ.
ರಾಮನಗರ, ಚನ್ನಪಟ್ಟಣ, ಇತರ ಸ್ಥಳಗಳಿಂದ ರೇಷ್ಮೆಗೂಡನ್ನು ತಂದು ಇಲ್ಲಿ ರೇಷ್ಮೆ ಹುಳುಗಳನ್ನು ಬೇಯಿಸುತ್ತಾರೆ. ಬೇಯಿಸಿದಾಗ ಇದರಿಂದ ಕೆಟ್ಟ ವಾಸನೆ ಬರುತ್ತದೆ. ಈ ವಾಸನೆ ಇಲ್ಲಿ ನಿಯಂತ್ರಣವಾಗಿರುವುದೇ ಇಲ್ಲಿರುವ ದಟ್ಟ ಮರಗಳಿಂದ. ಇಲ್ಲವಾದರೆ ಊರು ತುಂಬ ವಾಸನೆ ಆವರಿಸುತ್ತದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿಯ ಜಾಗದಲ್ಲಿರುವ ಮರಗಳು ಈ ಗಬ್ಬುವಾಸನೆಯನ್ನು ಈಗಲೂ ತಡೆಗಟ್ಟುತ್ತಿವೆ. ಈ ಜಾಗದಲ್ಲಿ ಸರ್ಕಾರ ಕ್ರೀಡಾಂಗಣ ನಿರ್ಮಿಸಲು 550 ಮರ ಕಡಿಯುವುದರಿಂದ ಪರಿಸರ ಹಾಳಾಗುತ್ತದೆ. ಜತೆಗೆ ವಾಸನೆ ಊರೆಲ್ಲ ಹರಡುತ್ತದೆ. ಜನರು ಬದುಕುವುದೇ ಕಷ್ಟಕರವಾಗುತ್ತದೆ. ಸುಡುವ ರೇಷ್ಮೆ ಗೂಡಿನ ವಾಸನೆಯಿಂದ ಕ್ರೀಡಾಪಟುಗಳು ಅನಾರೋಗ್ಯಕ್ಕೀಡಾಗಬಹುದು. ಶ್ವಾಸಕೋಶ ಸಮಸ್ಯೆಗಳೂ ಉದ್ಭವಿಸುತ್ತದೆ ಎಂದು ಎಚ್ಚರಿಸಿದರು.
ಮೈಸೂರು ಸಿಲ್ಕ್ ಫ್ಯಾಕ್ಟರಿ ಲಾಭದಲ್ಲಿದೆ. ಸಿಲ್ಕ್ ಸೀರೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ರೇಷ್ಮೆ ಸೀರೆಗಳೇ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಈಗ ಲಾಭದಲ್ಲಿರುವ ಮೈಸೂರು ಸಿಲ್ಕ್ ಫ್ಯಾಕ್ಟರಿ ವಿಸ್ತರಣೆ ಮಾಡಿ, ಇನ್ನಷ್ಟು ಕೆಲಸಗಾರರನ್ನು ನೇಮಕ ಮಾಡಿಕೊಂಡು, ಹೆಚ್ಚಿನ ಪ್ರಮಾಣದಲ್ಲಿ ಸೀರೆ ಉತ್ಪಾದನೆ ಮಾಡಬೇಕು. ಆದರೆ ಅದನ್ನು ಬಿಟ್ಟು, ಇದರ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಲು ಹೊರಟಿರುವುದು ಖಂಡನೀಯ ಹಾಗೂ ಈ ನಿರ್ಧಾರವೇ ಅವೈಜ್ಞಾನಿಕ ಎಂದು ಕಿಡಿಕಾರಿದರು.
ತಿ.ನರಸೀಪುರದಲ್ಲೇ ಬೇರೆ ಸೂಕ್ತ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಲಿ. ಯಾವುದೇ ಕಾರಣಕ್ಕೂ ಸಿಲ್ಕ್ ಫ್ಯಾಕ್ಟರಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಬಾರದು ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಪ್ರಭುಶಂಕರ್, ಗೋಲ್ಡನ್ ಸುರೇಶ್, ಕೃಷ್ಣಪ್ಪ, ಸಿಂಧುವಳ್ಳಿ ಶಿವಕುಮಾರ್, ಮಧುವನ ಚಂದ್ರು, ಬೋಗಾದಿ ಸಿದ್ದೇಗೌಡ, ಎಚ್.ಗಿರೀಶ್, ವೇಣು ಗೋಪಾಲ್ ಇತರರಿದ್ದರು.