ತಿ.ನರಸೀಪುರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಮಂಗಳವಾರ ಟಿ. ದೊಡ್ಡಪುರ ಗ್ರಾಮಸ್ಥರು ನಿವೇಶನ ಹಾಗೂ ವಾಸದ ಮನೆಗಳನ್ನು ರಕ್ಷಣೆ ಮಾಡಿಕೊಡುವಂತೆ ಆಗ್ರಹಿಸಿ ದಸಂಸ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಆಲಗೂಡು ಶಿವಕುಮಾರ್, ಯಾಚೇನಹಳ್ಳಿ ಸೋಮಶೇಖರ್, ಬನ್ನಹಳ್ಳಿಹುಂಡಿ ಉಮೇಶ್, ನಾಗರಾಜ ಮೂರ್ತಿ, ಪರಶಿವಮೂರ್ತಿ, ಕಾಳಯ್ಯ ಇತರರು ಇದ್ದರು. 
ಮೈಸೂರು

ದಲಿತರ ನಿವೇಶನ, ಮನೆ ಉಳಿಗೆ ಆಗ್ರಹ

ಎ. ಆರ್. ರಘುರಾಮ
ತಿ.ನರಸೀಪುರ" ತಾಲೂಕಿನ ಟಿ.ದೊಡ್ಡಪುರ ಗ್ರಾಮದಲ್ಲಿನ ದಲಿತರ ನಿವೇಶನಕ್ಕಾಗಿ ಸ್ವಾಧೀನಗೊಂಡಿರುವ ಭೂಮಿ ಹಾಗೂ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ವಾಸವಿರುವ ಮನೆಗಳನ್ನು ರಕ್ಷಣೆ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಪಟ್ಟಣದ ತಾಲೂಕು ಕಚೇರಿ ಮುಂಭಾಗ ಮಂಗಳವಾರ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಮುಂಭಾಗ ನೂರಾರು ಸಂಖ್ಯೆಯಲ್ಲಿ ಸೇರಿದ್ದ ತಲಕಾಡು ಹೋಬಳಿಯ ಟಿ.ದೊಡ್ಡಪುರ ಗ್ರಾಮಸ್ಥರು ಜನಪ್ರತಿನಿಧಿಗಳು ಹಾಗೂ ಆಡಳಿತ ವರ್ಗದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ಸರ್ಕಾರ ಹಾಗೂ ಆಡಳಿತ ವರ್ಗದ ನಿರ್ಲಕ್ಷ್ಯದಿಂದ ಟಿ.ದೊಡ್ಡಪುರ ಗ್ರಾಮದ ನೂರಾರು ದಲಿತ ಕುಟುಂಬಗಳು ಐವತ್ತು ವರ್ಷಗಳಿಂದ ಬದುಕನ್ನು ಕಟ್ಟಿಕೊಂಡಿರುವ ವಾಸದ ಮನೆ ಮತ್ತು ಭೂಮಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿವೆ. ನ್ಯಾಯಾಲಯ ನೀಡುತ್ತಿರುವ ನೋಟಿಸ್‌ನಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದಾರೆ. ವರ್ಷದಿಂದ ಜಿಲ್ಲಾಧಿಕಾರಿ ಹಾಗೂ ತಾಲೂಕು ಕಚೇರಿಗಳಿಗೆ ಅಲೆದರೂ ದೂರು ಆಲಿಸಿ, ಧೈರ್ಯ ತುಂಬಬೇಕಿದ್ದ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ಇದರಿಂದ ಭೂಮಿಯನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ. ಈ ಸಮಸ್ಯೆಯನ್ನು ಜಿಲ್ಲಾ ಹಾಗೂ ತಾಲೂಕು ಆಡಳಿತ ಸರಿಪಡಿಸದಿದ್ದರೆ ಹೋರಾಟ ತೀವ್ರ ಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಗ್ರಾಮದ ಯಜಮಾನ ಕಾಳಯ್ಯ ಮಾತನಾಡಿ, ಕಳೆದ 1960-61ರಲ್ಲಿ ಟಿ.ದೊಡ್ಡಪುರ ಗ್ರಾಮದ ಸರ್ವೇ ನಂ. 459/1,2,3 ರ 2.16 ಎಕರೆ ವಿಸ್ತೀರ್ಣದ ಭೂಮಿಯಲ್ಲಿ ಆಶ್ರಯ ಯೋಜನೆಯಡಿ ಸರ್ಕಾರವೇ ಮಂಜೂರು ಮಾಡಿರುವ ಸುಮಾರು 70 ನಿವೇಶನಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಮೂರು ತಲೆಮಾರುಗಳಿಂದ ವಾಸಿಸುತ್ತಿದ್ದೇವೆ. ಹೀಗಿದ್ದರೂ ವ್ಯಕ್ತಿಯೊಬ್ಬರು ಭೂಮಿ ನಮ್ಮದೆಂದು ನ್ಯಾಯಾಲಯದ ಮೊರೆ ಹೋಗಿ, ನಮ್ಮನ್ನು ಒಕ್ಕಲೆಬ್ಬಿಸುವ ಭಯವನ್ನು ಸೃಷ್ಟಿಸಿದ್ದಾರೆ. ಈ ಸಂಬಂಧ ವರ್ಷದಿಂದಲೂ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಸೌದಗಳಿಗೆ ಅಲೆದರೂ ನಮ್ಮ ಬದುಕನ್ನು ಉಳಿಸಿಕೊಡುವ ಕೆಲಸವನ್ನು ಅಧಿಕಾರಿಗಳು ಮಾಡಲೇ ಇಲ್ಲ ಎಂದು ಆರೋಪಿಸಿದರು.
ಬಳಿಕ ಮುಖ್ಯಮಂತ್ರಿಗಳಿಗೆ ತಹಸೀಲ್ದಾರ್ ಟಿ.ಜೆ.ಸುರೇಶಾಚಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ದಸಂಸ ತಾಲೂಕು ಸಂಚಾಲಕ ಯಾಚೇನಹಳ್ಳಿ ಸೋಮಶೇಖರ್, ಮುಖಂಡರಾದ ಬನ್ನಹಳ್ಳಿಹುಂಡಿ ಉಮೇಶ್, ಆಲಗೂಡು ನಾಗರಾಜ್ ಮೂರ್ತಿ, ಎಂ.ಬಿ.ನಿಂಗರಾಜು, ಮಹದೇವಸ್ವಾಮಿ, ಮುತ್ತು, ದೊಡ್ಡಪುರ ಪರಶಿವಮೂರ್ತಿ, ಗಂಗಾಧರ್ ಸ್ವಾಮಿ, ಹಿರಿಯೂರು ಸೋಮಣ್ಣ, ಉಕ್ಕಲಗೆರೆ ರವಿಕುಮಾರ್, ಲಕ್ಷ್ಮೀಪುರ ಲಿಂಗರಾಜು, ತುರಗನೂರು ಲಕ್ಷಣ, ಆದಿಬೆಟ್ಟಹಳ್ಳಿ ಮಲ್ಲಯ್ಯ, ತುಂಬಲ ಅಶ್ವಥ್, ಗ್ರಾಮಸ್ಥರಾದ ಗಂಗಾಧರಸ್ವಾಮಿ, ಲಿಂಗರಾಜು, ಪರಶಿವಮೂರ್ತಿ, ಕಾಳಯ್ಯ, ಶಿವನಂಜಯ್ಯ, ಮರಡಯ್ಯ, ಸುಂದರ, ಮಂಟೇಲಿಂಗಯ್ಯ, ಮಹದೇವ, ಸಿದ್ದರಾಜು, ಬಸವಣ್ಣ, ಹರ್ಷವರ್ಧನ, ಮಹಾದೇವಿ, ಶಿವಮ್ಮ, ರಾಜಮ್ಮ, ಭಾಗ್ಯಮ್ಮ ಹಾಗೂ ಇತರರು ಇದ್ದರು.