ತಿ.ನರಸೀಪುರ ಪಟ್ಟಣದ ಕೆಎಸ್‌ಐಸಿ ರೇಷ್ಮೆ ಕಾರ್ಖಾನೆ ಮುಂಭಾಗ ಹೋರಾಟಗಾರ ಸಭೆಯಲ್ಲಿ ಪರಿಸರಕ್ಕಾಗಿ ನಾವು ಸಂಘಟನೆ ರಾಜ್ಯ ಕಾರ್ಯದರ್ಶಿ ಪರಶುರಾಮೇಗೌಡ ಮಾತನಾಡಿದರು. ಹೊಸಕೋಟೆ ಬಸವರಾಜು, ಆಲಗೂಡು ಶಿವಕುಮಾರ್, ಕರೋಹಟ್ಟಿ ಕುಮಾರಸ್ವಾಮಿ, ಕಿರಗಸೂರು ಶಂಕರ್, ಈ.ರಾಜು ಇತರರಿದ್ದರು.
ತಿ.ನರಸೀಪುರ : ಪಟ್ಟಣದ ಕೆಎಸ್‌ಐಸಿ ರೇಷ್ಮೆ ಕಾರ್ಖಾನೆಯ ನಿವೇಶನದಲ್ಲಿ ಕ್ರೀಡಾಂಗಣ ನಿರ್ಮಾಣ ಕೈ ಬಿಡುವ ನಿರ್ಧಾರವನ್ನು ಸರ್ಕಾರ 10 ದಿನಗಳೊಳಗೆ ಪ್ರಕಟಿಸದಿದ್ದಲ್ಲಿ ಮತ್ತೆ ಎರಡನೇ ಹಂತದಲ್ಲಿ ಸಂಘಟನೆಗಳ ವತಿಯಿಂದ ಉಗ್ರ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಹಲವು ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದರು.
ಪಟ್ಟಣದ ಕೆಎಸ್‌ಐಸಿ ರೇಷ್ಮೆ ನೂಲು ತೆಗೆಯುವ ಕಾರ್ಖಾನೆಯ ಮುಂಭಾಗ ಶುಕ್ರವಾರ ಕರ್ನಾಟಕ ರಾಜ್ಯ ರೈತಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘ, ಕರ್ನಾಟಕ ಪರಿಸರ ಬಳಗ, ಪರಿಸರಕ್ಕಾಗಿ ನಾವು ಹಾಗೂ ದಸಂಸ ಸಂಘಟನೆಗಳ ಮುಖಂಡರು ಸಭೆ ನಡೆಸಿ, ಕ್ರೀಡಾಂಗಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಕಾರ್ಮಿಕರಿಗೆ ನೀಡಿರುವ ಭರವಸೆಯ ಸಾಧಕ ಬಾಧಕಗಳನ್ನು ಚರ್ಚೆ ನಡೆಸಿದರು.
ಪರಿಸರಕ್ಕಾಗಿ ನಾವು ಸಂಘಟನೆ ರಾಜ್ಯ ಕಾರ್ಯದರ್ಶಿ ಪರಶುರಾಮೇಗೌಡ ಮಾತನಾಡಿ, ಕೆಎಸ್‌ಐಸಿಯಲ್ಲಿ ಕ್ರೀಡಾಂಗಣ ನಿರ್ಮಿಸುವ ಕುರಿತು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಕಾರ್ಮಿಕರು ಮತ್ತು ಕಾರ್ಖಾನೆ ಉಳಿಸುವ ಬಗ್ಗೆ ಆಶ್ವಾಸನೆ ನೀಡಿದ್ದು, ಅವರ ನಿರ್ಧಾರ ಸ್ವಾಗತಾರ್ಹ. ಸರ್ಕಾರ, ಕ್ರೀಡಾಂಗಣ ನಿರ್ಮಿಸುವ ಕುರಿತು ಮಾ.15ರ ಒಳಗೆ ತನ್ನ ನಿಲುವು ಪ್ರಕಟಿಸಬೇಕು. ಇಲ್ಲವಾದಲ್ಲಿ ರೈತ ಸಂಘ, ಕಬ್ಬು ಬೆಳೆಗಾರರ ಸಂಘ, ದಸಂಸ ಸೇರಿದಂತೆ ಹಲವು ಸಂಘಟನೆಗಳ ಜತೆ ಚರ್ಚಿಸಿ ಉಗ್ರ ಹೋರಾಟದ ರೂಪುರೇಷೆಯನ್ನು ರೂಪಿಸಲಾಗುವುದು ಎಂದರು.
ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ಸದರಿ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವಲ್ಲಿ ಜನಪ್ರತಿನಿಧಿಗಳು ಪ್ರತಿಷ್ಠೆ ತೋರುವುದು ಸಲ್ಲದು. ಇದರಿಂದ ಕಾರ್ಮಿಕರು ಮತ್ತು ಜೀವ ವೈವಿಧ್ಯಗಳ ಭವಿಷ್ಯ ಅಡಗಿದೆ. ಹಾಗಾಗಿ ಕೆಎಸ್‌ಐಸಿ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ನಿರ್ಧಾರವನ್ನು ಕೈಬಿಟ್ಟು, ಶೀಘ್ರ ಬೇರೆ ಜಾಗವನ್ನು ಗುರುತಿಸಿ ಕ್ರೀಡಾಂಗಣಕ್ಕಾಗಿ ಬಜೆಟ್‌ನಲ್ಲಿ ಮೀಸಲಿಟ್ಟಿರುವ 6 ಕೋಟಿ ರೂ.ಗಳ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ಕಳೆದ 15 ದಿನಗಳಿಂದ ನಡೆದ ಕಾರ್ಮಿಕರ ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದವು. ಅಧಿಕಾರಿಗಳು ಕೆಎಸ್‌ಐಸಿ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಕುರಿತು ಜನಪ್ರತಿನಿಧಿಗಳಿಗೆ ತಪ್ಪು ಮಾಹಿತಿ ನೀಡಿದ್ದು, ಯತೀಂದ್ರ ಅವರು ಸ್ಥಳ ಪರಿಶೀಲನೆ ನಡೆಸಿದ ನಂತರ ಅವರಿಗೆ ಆಡಳಿತಾತ್ಮಕ ಲೋಪ ಮನವರಿಕೆ ಆಗಿದೆ. ಹಾಗಾಗಿ ಸರ್ಕಾರ ಕಾರ್ಮಿಕರಿಗೆ ಉತ್ತಮ ಸಂದೇಶ ನೀಡುವ ಭರವಸೆಯಿದೆ. ಅಲ್ಲದೆ ಕಾರ್ಮಿಕರ ಮತ್ತು ಕಾರ್ಖಾನೆ ಉಳಿವಿಗೆ ನಮ್ಮ ಸಂಘಟನೆ ಬದ್ಧವಾಗಿದೆ ಎಂದರು.
ಕರ್ನಾಟಕ ಪರಿಸರ ಬಳಗದ ಸದಸ್ಯರಾದ ವಿಶ್ವನಾಥ್, ಗಂಟಯ್ಯ (ಕೃಷ್ಣಪ್ಪ ), ಭಾನುಪ್ರಶಾಂತ್, ಸಿಂಧುವಳ್ಳಿ ಅಕ್ಬರ್, ರೈತ ಸಂಘದ ತಾಲೂಕು ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ, ಜಿಲ್ಲಾ ಮುಖಂಡ ಈ.ರಾಜು, ಪ್ರಧಾನ ಕಾರ್ಯದರ್ಶಿ ಬೂದಹಳ್ಳಿ ಶಂಕರ್, ಮುಖಂಡರಾದ ಆಲಗೂಡು ಎ.ಜಿ.ಮಹದೇವ್, ಕವಲಂದೆ ಮಹೇಶ್, ಕಳ್ಳಿಪುರ ನಾರಾಯಣ್, ಶಾಂತಮೂರ್ತಿ, ಕಾರ್ಮಿಕ ಸಂಘಟನೆ ಮುಖಂಡ ಸಿ.ಪುಟ್ಟಮಲ್ಲಯ್ಯ ಮತ್ತಿತರರಿದ್ದರು.