ಶಾಸಕ ಕೆ.ಹರೀಶ್ ಗೌಡ 
ಮೈಸೂರು

ಪಾಲಿಕೆಗೆ ಸೇರಿದ ಖಾಲಿ ನಿವೇಶನ, ಆಸ್ತಿಗಳನ್ನು ಸಂರಕ್ಷಿಸಿ

ಪ್ರಮುಖ ಮುಖ್ಯಾಂಶಗಳು

  • ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಕೆ.ಹರೀಶ್‌ಗೌಡ ಮನವಿ
ಮೈಸೂರು: ಚಾಮರಾಜ ಕ್ಷೇತ್ರದಲ್ಲಿರುವ ಪಾಲಿಕೆಗೆ ಸೇರಿದ ಖಾಲಿ ನಿವೇಶನಗಳು ಹಾಗೂ ಖಾಲಿ ಇರುವ ಆಸ್ತಿಗಳನ್ನು (ಜಾಗ) ಸಂರಕ್ಷಣೆ ಮಾಡುವುದು ಹಾಗೂ ಈ ಆಸ್ತಿಗಳನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸುವಂತೆ ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಕೆ.ಹರೀಶ್‌ಗೌಡ ಮನವಿ ಮಾಡಿದರು.
ರಾಜ್ಯ ನಗರಾಭಿವೃದ್ಧಿ ಯೋಜನೆ ಸಚಿವ ಭೈರತಿ ಸುರೇಶ್ ಪ್ರತಿಕ್ರಿಯಿಸಿ, ಚಾಮರಾಜ ಕ್ಷೇತ್ರದ ಪಾಲಿಕೆ ವಲಯ ಕಚೇರಿ 04, 05, 06 ಮತ್ತು ಭಾಗಶಃ 07 ವಾರ್ಡ್‌ಗಳಲ್ಲಿ ಒಟ್ಟು 6 ಖಾಲಿ ಜಾಗಗಳು ಇವೆ. ಸಯ್ಯಜಿರಾವ್ ರಸ್ತೆಯಲ್ಲಿರುವ ಆರ್‌ಎಂಸಿ ಬಸ್ ನಿಲ್ದಾಣ ಪಕ್ಕ, ಯಾದವಗಿರಿಯಲ್ಲಿ 8ನೇ ಮೇನ್‌ನಲ್ಲಿರುವ ಖಾಲಿ ಜಾಗ, ಯಾದವಗಿರಿಯಲ್ಲಿ ಬಯಲು ರಂಗ ಮಂದಿರದ ಬಳಿ, ಯಾದವಗಿರಿ 4ನೇ ಮೇನ್‌ನಲ್ಲಿರುವ ರೈಲ್ವೆ ಟ್ರ್ಯಾಕ್ ಪಕ್ಕದ ಖಾಲಿ ಜಾಗ, ಮೇದರ್ ಬ್ಲಾಕ್ 3ನೇ ಮೇನ್‌ನಲ್ಲಿ ರೈಲ್ವೆ ಟ್ರ್ಯಾಕ್ ಪಕ್ಕ, ಆಶ್ರಯ ಮನೆ ಯೋಜನೆಗೆ ಮೀಸಲಿಟ್ಟಿರುವ ಹೆಬ್ಬಾಳು ಗ್ರಾಮ ಶುಭೋದಿನಿ ಕಲ್ಯಾಣ ಮಂಟಪ ಪಕ್ಕದಲ್ಲಿರುವ ಜಾಗ ಖಾಲಿ ಇವೆ. ಈ ಜಾಗಗಳಿಗೆ ಹಾಲಿ ವಲಯ ಕಚೇರಿಗಳ ವ್ಯಾಪ್ತಿಯಲ್ಲಿ ತಂತಿ ಬೇಲಿ ಅಳವಡಿಸಿ, ಪಾಲಿಕೆ ನಾಮಲಕ ಹಾಕಲಾಗಿದೆ. ಕಾಲಕಾಲಕ್ಕೆ ಸ್ವಚ್ಛಗೊಳಿಸಿ ಸಂರಕ್ಷಣೆ ಮಾಡಲಾಗುತ್ತಿದೆ. ಆದರೆ, ಇವುಗಳಲ್ಲಿ ಸಯ್ಯಜಿ ರಾವ್ ರಸ್ತೆಯಲ್ಲಿರುವ ಆರ್‌ಎಂಸಿಬಸ್ ನಿಲ್ದಾಣ ಪಕ್ಕದ ಹಾಗೂ ಮೇದರ್ ಬ್ಲಾಕ್ 3ನೇ ಮೇನ್‌ನಲ್ಲಿ ರೈಲ್ವೆ ಟ್ರ್ಯಾಕ್ ಪಕ್ಕದ ಜಾಗವನ್ನು ಸರ್ಕಾರದ ಅನುಮತಿ ಪಡೆದು ಸಾರ್ವಜನಿಕ ಉದ್ದೇಶಕ್ಕೆ ಬಳಸಬಹುದಾಗಿದೆ ಎಂದು ತಿಳಿಸಿದರು.
33 ಸಮುದಾಯ ಭವನಗಳಿದ್ದು, ಈ ಎಲ್ಲ ಸಮುದಾಯ ಭವನಗಳನ್ನು ಸಾರ್ವಜನಿಕ ಉದ್ದೇಶಿತ ಅವಶ್ಯ ಕಾರ್ಯಕ್ರಮಗಳಿಗೆ ಉಚಿತವಾಗಿ ಬಳಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.