ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಹರವೆ ಕಾವೇರಿ ಸಾಕಾನೆ ಶಿಬಿರದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅತಿಥಿಗಳು ಗಿಡ ನೆಟ್ಟು ನೀರು ಹಾಕಿದರು. ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಕಾಂತ್, ಕೆ. ಇ. ಸುಬ್ರಹ್ಮಣ್ಯ, ಟೆಂಜಿನ್, ಪಿ.ಎಲ್. ರಾಮಣ್ಣ ಇತರರು ಇದ್ದರು.  
ಮೈಸೂರು

ಜೀವ ಸಂಕುಲದ ಉಳಿವಿಗೆ ಪರಿಸರ ರಕ್ಷಿಸಿ

ಪ್ರಮುಖ ಮುಖ್ಯಾಂಶಗಳು

  • ವನ್ಯಜೀವಿ ಉಪವಿಭಾಗದ ಎಸಿಎಫ್ ಶ್ರೀಕಾಂತ್ ಸಲಹೆ
  • ಕಾವೇರಿ ಸಾಕಾನೆ ಶಿಬಿರದಲ್ಲಿ ಸಸಿ ನೆಡುವ ಕಾರ್ಯಕ್ರಮ
ಬೈಲುಕುಪ್ಪೆ: ಜೀವ ಸಂಕುಲದ ಉಳಿವಿಗೆ ಪರಿಸರ ಸಂರಕ್ಷಣೆ ಅವಶ್ಯಕವಾಗಿದೆ ಎಂದು ಹುಣಸೂರಿನ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಕಾಂತ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಹರವೆ ಕಾವೇರಿ ಸಾಕಾನೆ ಶಿಬಿರದಲ್ಲಿ ‘ಏಕ್ ಪೇಡ್ ಮಾ ಕೆ ನಾಮ್ ಸೇ’ ಎಂಬ ಅಭಿಯಾನದಡಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾವು ಪ್ರಾಣಿ, ಪಕ್ಷಿಗಳ ಸಂತತಿ ಉಳಿಸಿದರೆ ಅವುಗಳು ಪರೋಕ್ಷವಾಗಿ ನಮ್ಮ ಬದುಕನ್ನೂ ಸುಗಮ ಮಾಡುತ್ತವೆ. ಬೀಜ ಪ್ರಸಾರ ಮಾಡುವ ಮೂಲಕ ಹೆಚ್ಚು ಹೆಚ್ಚು ಗಿಡಗಳು ಹುಟ್ಟಲು ಸಹಕಾರಿಯಾಗಿವೆ.
ಈ ಮೂಲಕ ಅರಣ್ಯ ಸಂರಕ್ಷಣೆಗೆ ನೆರವಾಗಿವೆ ಎಂದರು. ಜನರು ಸ್ವಾರ್ಥಕ್ಕಾಗಿ ಮರ ಗಿಡಗಳನ್ನು ನಾಶ ಮಾಡುತ್ತಿರುವ ಪ್ರವೃತ್ತಿ ಹೆಚ್ಚಾಗಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಮಳೆ, ಬೆಳೆ ಪ್ರಮಾಣ ಕಡಿಮೆಯಾಗುತ್ತಿದೆ. ಭೂಮಿಯ ತಾಪಮಾನ ಹೆಚ್ಚಿದ್ದು ಇದರ ಗಂಭೀರ ಪರಿಣಾಮವನ್ನು ನಾವು ಎದುರಿಸುತ್ತೇವೆ ಎಂದು ತಿಳಿಸಿದರು.
ಹುಣಸೂರು ಉಪವಿಭಾಗದ ಡಿವೈಎಸ್‌ಪಿ ರವಿ ಮಾತನಾಡಿ, ಪರಿಸರ ದಿನಾಚರಣೆಯಂದು ಮಾತ್ರ ಗಿಡ ನೆಡುವುದು ಮುಖ್ಯವಲ್ಲ, ಆ ಗಿಡಕ್ಕೆ ನೀರು ಹಾಕಿ ಸಂರಕ್ಷಿಸುವುದು ಬಹಳ ಮುಖ್ಯ ಎಂದರು.
ಶಾಲಾ ಮಕ್ಕಳು ಹಾಗೂ ಅರಣ್ಯ ಸಿಬ್ಬಂದಿ ಸಹಕಾರದಿಂದ ವಿವಿಧ ಜಾತಿಯ 150ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ನೀರು ಎರೆಯಲಾಯಿತು ಈ ಸಂದರ್ಭ ಹುಣಸೂರಿನ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಅಧಿಕಾರಿ ಕೆ. ಇ. ಸುಬ್ರಹ್ಮಣ್ಯ, ಬೈಲುಕುಪ್ಪೆ ಟಿಬೆಟಿಯನ್ ಟಿಡಿಎಲ್ ನ್ಯೂ ಸೆಟಲ್ಮೆಂಟ್ ಅಧ್ಯಕ್ಷ ಟೆಂಜಿನ್, ಹುಣಸೂರು ವನ್ಯಜೀವಿ ವಲಯ ಅರಣ್ಯ ಅಧಿಕಾರಿ ಪಿ.ಎಲ್. ರಾಮಣ್ಣ ಇತರರು ಇದ್ದರು.