ಮೈಸೂರಿನ ಜಯದೇವ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ್ದ ನಿರ್ದೇಶಕ ಡಾ.ಬಿ.ದಿನೇಶ್ ವಿವಿಧ ವಿಭಾಗಗಳನ್ನು ಪರಿಶೀಲಿಸಿದರು. ಡಾ.ಕೆ.ಎಸ್. ಸದಾನಂದ್, ಸಿಬ್ಬಂದಿ ಇದ್ದರು.
- ಕಾಮಗಾರಿ ಪೂರ್ಣಗೊಂಡರೆ 2040 ವರೆಗೂ ಯಾವ ರೋಗಿಗಳಿಗೂ ಹಾಸಿಗೆಯ ಕೊರತೆ ಬರುವುದಿಲ್ಲ
- 200 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಬಜೆಟ್‌ನಲ್ಲಿ 186 ಕೋಟಿ ರೂ.ಗಳನ್ನು ಮಂಜೂರು
ಮೈಸೂರು:ರೋಗಿಗಳಿಗೆ ಯಾವುದೇ ಬೆಡ್‌ನ ಕೊರತೆಯಾಗದಂತೆ ಹೆಚ್ಚುವರಿಯಾಗಿ 200 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದು, ಸರ್ಕಾರಿ ಆದೇಶ ಬಂದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಬಿ.ದಿನೇಶ್ ತಿಳಿಸಿದರು.
ನಗರದ ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ವಿಭಾಗಗಳ ಕಾರ್ಯ ವೈಖರಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉದ್ದೇಶಿಸಿತ 200 ಹಾಸಿಗೆ ಸಾಮರ್ಥ್ಯದ ಕಾಮಗಾರಿ ಪೂರ್ಣಗೊಂಡರೆ 2040 ವರೆಗೂ ಯಾವ ರೋಗಿಗಳಿಗೂ ಹಾಸಿಗೆಯ ಕೊರತೆ ಬರುವುದಿಲ್ಲ. ಕಾಮಗಾರಿ ಆರಂಭಗೊಂಡ 24 ತಿಂಗಳೊಳಗೆ ಮುಗಿಸಿ ಸಾರ್ವಜನಿಕ ಸೇವೆಗೆ ಸಮರ್ಪಣೆ ಮಾಡಲಾಗುವುದು ಎಂದು ಹೇಳಿದರು.
ಮೈಸೂರು ಜಯದೇವ ಆಸ್ಪತ್ರೆಗೆ ಮೈಸೂರು, ಹಾಸನ, ಮಂಡ್ಯ, ಕೊಡಗು, ಚಾಮರಾಜನಗರ ಸೇರಿದಂತೆ ವಿವಿಧೆಡೆಯಿಂದ ಹೆಚ್ಚಿನ ಹೃದಯ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದಾರೆ. ಇದರಿಂದ ಆಸ್ಪತ್ರೆ ಮೇಲೆ ಒತ್ತಡ ಆಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚುವರಿಯಾಗಿ 200 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಬಜೆಟ್‌ನಲ್ಲಿ 186 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದಾರೆ. ಸ್ಥಳೀಯ ಶಾಸಕರ ಸಹಕಾರದೊಂದಿಗೆ ಕೆಲಸ ಪ್ರಾರಂಭ ಮಾಡಲಾಗುವುದು. ಹೊಸಕಟ್ಟಡದಲ್ಲಿ ಮಕ್ಕಳ ಹೃದಯ ಚಿಕಿತ್ಸಾ ವಿಭಾಗ, ವ್ಯಾಸ್‌ಕ್ಯೂಲರ್ ಸರ್ಜರಿ ವಿಭಾಗ, ಕ್ಯಾತ್‌ಲ್ಯಾಬ್‌ಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಮಧ್ಯ ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ಭಾಗದಲ್ಲಿಯೂ ಜಯದೇವ ಆಸ್ಪತ್ರೆ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಸರ್ಕಾರ ಒಪ್ಪಿದರೆ ಮಾಡುತ್ತೇವೆ. ಇದರಿಂದ ರಾಜ್ಯದ ಎಲ್ಲ ಭಾಗಗಳಲ್ಲಿಯೂ ಹೃದ್ರೋಗ ಚಿಕಿತ್ಸೆ ಜನರಿಗೆ ಸುಲಭವಾಗಿ ದೊರೆಯುವಂತಾಗುತ್ತದೆ ಎಂದು ಹೇಳಿದರು.
ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್. ಸದಾನಂದ್ ಅವರೊಂದಿಗೆ ಆಸ್ಪತ್ರೆಯ ವಾರ್ಡ್‌ಗಳು, ಕ್ಯಾಂಟಿನ್, ತುರ್ತು ಚಿಕಿತ್ಸಾ ವಿಭಾಗ, ಪಾರ್ಕಿಂಗ್ ಆವರಣ, ಡಾರ್ಮೆಂಟರಿ ಕಾಮಗಾರಿ ಪರಿಶೀಲಿಸಿ, ರೋಗಿಗಳ ಸಂಬಂಧಿಕರಿಗೆ ಅವಶ್ಯವಿರುವ ಮೂಲಸೌಕರ್ಯ ಒದಗಿಸಿಕೊಡಬೇಕು ಎಂದು ಇಂಜಿನಿಯರ್‌ಗಳಿಗೆ ಸಲಹೆ ನೀಡಿದರು.
ವೈದ್ಯರಾದ ಡಾ.ಹರ್ಷ ಬಸಪ್ಪ, ಡಾ.ಸಂತೋಷ್, ಡಾ.ರಾಜೀವ್, ಡಾ.ವೀಣಾನಂಜಪ್ಪ, ಡಾ.ಜಯಪ್ರಕಾಶ್, ಡಾ.ವಿಶ್ವನಾಥ್, ಡಾ.ಶ್ರೀಮಂತ್, ಡಾ.ಕುಮಾರ್, ಡಾ.ಭಾರತಿ, ಡಾ.ರಶ್ಮಿ, ಡಾ.ದೇವರಾಜ್, ಡಾ.ಶ್ರೀನಿಧಿ ಹೆಗ್ಗಡೆ, ಆರ್‌ಎಂಒ ಡಾ.ಪಶುಪತಿ, ಡಾ.ಮಂಜುನಾಥ್, ಸಿಬ್ಬಂದಿ ಹರೀಶ್‌ಕುಮಾರ್, ವಾಣಿ ಮೋಹನ್, ಗುರುಮೂರ್ತಿ, ನಾಗರಾಜ್, ಚಂಪಕಮಾಲಾ ಇದ್ದರು.