ಕೆ.ಆರ್.ನಗರ ತಾಲೂಕಿನ ಮಂಚನಹಳ್ಳಿ ಗ್ರಾಮದಲ್ಲಿ ರಸ್ತೆಗಳ ಕಾಂಕ್ರೀಟಿಕರಣ ಮತ್ತು ಬಾಕ್ಸ್ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ರವಿಶಂಕರ್ ಭೂಮಿಪೂಜೆ ನೆರವೇರಿಸಿದರು. ಚೀರ‌್ನಹಳ್ಳಿ ಶಿವಣ್ಣ, ಎಂ.ಎಸ್.ಅನಂತು, ಎಚ್.ಪಿ.ಪ್ರಶಾಂತ್, ಮಂಚನಹಳ್ಳಿರಘು, ಹರಿರಾಜು, ಮಂಚನಹಳ್ಳಿಧನು ಇನ್ನಿತರರು ಹಾಜರಿದ್ದರು.
ಕೆ.ಆರ್.ನಗರ : ಮಂಚನಹಳ್ಳಿ ಗ್ರಾಮಕ್ಕೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು 5 ಕೋಟಿ ರೂ. ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಹಣ ಬಿಡುಗಡೆ ಹಂತದಲ್ಲಿದೆ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.
ತಾಲೂಕಿನ ಮಂಚನಹಳ್ಳಿ ಗ್ರಾಮದಲ್ಲಿ ಬುಧವಾರ ಗ್ರಾಮ ಪರಿಮಿತಿ ರಸ್ತೆಗಳ ಕಾಂಕ್ರೀಟಿಕರಣ ಮತ್ತು ಬಾಕ್ಸ್ ಚರಂಡಿ ನಿರ್ಮಾಣಕ್ಕಾಗಿ 1 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗ್ರಾಮದ ಜನರ ಬಹುದಿನಗಳ ಬೇಡಿಕೆಯಾಗಿರುವ ಕುಡಿಯುವ ನೀರಿನ ಓವರ್‌ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುತ್ತದೆ ಎಂದರು.
ಈಗಾಗಲೇ ನಿರ್ಮಾಣ ಹಂತದಲ್ಲಿರುವ ನಿರ್ವಾಣೇಶ್ವರಸ್ವಾಮಿ ದೇವಾಲಯದ ಮುಂದುವರಿದ ಕಾಮಗಾರಿಗೆ 10 ಲಕ್ಷ ರೂಪಾಯಿಗಳ ಅನುದಾನ ನೀಡಿ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಸ್ಥಗಿತಗೊಂಡಿರುವ ಆಂಜನೇಯ ಸ್ವಾಮಿ ದೇವಾಲಯದ ಮುಂದುವರಿದ ಕಾಮಗಾರಿಗೆ 5 ಲಕ್ಷ ರೂ. ಅನುದಾನ ನೀಡಿ ಕೆಲಸ ಪೂರ್ಣಗೊಳಿಸಿ ದೇವಾಲಯ ಉದ್ಘಾಟನೆ ಮಾಡುವುದಾಗಿ ಭರವಸೆ ನೀಡಿದರು.
ಗ್ರಾಮದ ಕೆಲವು ದಿನಸಿ ಚಹಾದಂಗಡಿ ಹಾಗೂ ಹೋಟೆಲ್‌ಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವುದರಿಂದ ಯುವಕರು ದುಶ್ಚಟಕ್ಕೀಡಾಗುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಅಧಿಕಾರಿಗಳ ಸಭೆ ಕರೆದು ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ. ಗ್ರಾಮದ ಕೆರೆಯ ಹೂಳೆತ್ತಿಸುವ ಅಭಿವೃದ್ಧಿ ಪಡಿಸುವ ಜತೆಗೆ ಸ್ಮಶಾನವನ್ನು ಅಭಿವೃದ್ಧಿ ಪಡಿಸಿಕೊಡಲಾಗುವುದು ಎಂದು ಹೇಳಿದರು.
ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಾನು ಕಂಕಣ ಬದ್ಧನಾಗಿದ್ದು ಹಂತ ಹಂತವಾಗಿ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡುವ ಭರವಸೆ ನೀಡಿದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಚೀರ‌್ನಹಳ್ಳಿ ಶಿವಣ್ಣ, ಗ್ರಾಪಂ ಮಾಜಿ ಸದಸ್ಯ ಎಂ.ಎಸ್.ಅನಂತು ಮಾತನಾಡಿದರು. ಹಂಪಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಪಿ.ಪ್ರಶಾಂತ್, ನಿರ್ದೇಶಕ ದೇವರಾಜು, ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ಬೋರಣ್ಣ, ಮುಖಂಡರಾದ ಮಂಚನಹಳ್ಳಿ ರಘು, ಹರಿರಾಜು, ಮಂಚನಹಳ್ಳಿ ಧನು, ಈರೇಗೌಡ, ಹಲಗೇಗೌಡ, ಮಂಜುನಾಥ್, ಮಹೇಶ್, ಕಾಳಪ್ಪ, ಬಸವರಾಜು, ಲೋಕೋಪಯೋಗಿ ಇಲಾಖೆಯ ಎಇಇ ಸುಮಿತ್ರಾ, ಪಿಡಿಒ ಅಶ್ವಿನಿ ಸೇರಿದಂತೆ ಇನ್ನಿತರರು ಹಾಜರಿದ್ದರು.