ಜಮೀನಿಗೆ ರಸ್ತೆ ಬಿಡಿಸಿಕೊಡುವಂತೆ ಒತ್ತಾಯಿಸಿ ಎಚ್.ಡಿ.ಕೋಟೆ ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ಪಡುಕೋಟೆ ಗ್ರಾಮದ ರೈತ ಬಾಬು ಪ್ರಗತಿಪರ ಸಂಘಟನೆಗಳೊಡಗೂಡಿ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಹುಣಸೂರು ಉಪ ವಿಭಾಗಾಧಿಕಾರಿ ಮಂಜುನಾಥ್ ಭೇಟಿ ನೀಡಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ತಹಸೀಲ್ದಾರ್ ಶ್ರೀನಿವಾಸ್, ಪೊಲೀಸ್ ಇನ್‌ಸ್ಪೆಕ್ಟರ್ ಗಂಗಾಧರ್ ಇದ್ದರು.
ಜಮೀನಿಗೆ ಸಂಚರಿಸಲು ರಸ್ತೆ ಬಿಡಿಸಿಕೊಡುವಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳೊಡಗೂಡಿ ರೈತ ನಡೆಸುತ್ತಿರುವ ಪ್ರತಿಭಟನೆ ಶನಿವಾರ ಆರನೇ ದಿನವೂ ಮುಂದುವರಿದಿದೆ.
ಜಮೀನಿನ ರಸ್ತೆಗಾಗಿ ಖಾಸಗಿ ವ್ಯಕ್ತಿಯಿಂದ ಖರೀದಿ ಮಾಡಿದ ಜಾಗವನ್ನು ಸರ್ವೇ ಇಲಾಖೆ ಅಧಿಕಾರಿಗಳು ಪೋಡಿ ಮಾಡಿಕೊಡದೆ ಪಕ್ಕದ ಜಮೀನಿನ ಮಾಲೀಕರ ಆಮಿಷಕ್ಕೆ ಒಳಗಾಗಿ ನನಗೆ ವಿನಾಕಾರಣ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿ ಪಡುಕೋಟೆ ಗ್ರಾಮದ ಬಾಬು ಅವರು ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ಕೈಗೊಂಡಿದ್ದಾರೆ. ಅವರಿಗೆ ಹಲವು ಸಂಘಟನೆಗಳು ಬೆಂಬಲ ನೀಡಿವೆ.
ಈ ವಿಚಾರ ತಿಳಿದು ಶನಿವಾರ ಹುಣಸೂರು ಉಪ ವಿಭಾಗಾಧಿಕಾರಿ ಮಂಜುನಾಥ್ ಅವರು ತಹಸೀಲ್ದಾರ್ ಶ್ರೀನಿವಾಸ್, ಪೊಲೀಸ್ ಇನ್‌ಸ್ಪೆಕ್ಟರ್ ಗಂಗಾಧರ್ ಅವರ ಜತೆಗೂಡಿ ಪ್ರತಿಭಟನಾನಿರತ ಸ್ಥಳಕ್ಕೆ ಭೇಟಿ ನೀಡಿ, ಬಾಬು ಹಾಗೂ ಪ್ರಗತಿಪರ ಸಂಘಟನೆಗಳ ಜತೆ ಜಮೀನಿನ ವಿಚಾರವಾಗಿ ಚರ್ಚಿಸಿ, ಮಂಗಳವಾರದವರೆಗೆ ಕಾಲಾವಕಾಶ ನೀಡಿ, ಜಮೀನಿಗೆ ತೆರಳಲು ರಸ್ತೆ ಬಿಡಿಸಿ ಕೊಡಲಾಗುತ್ತದೆ. ಹಾಗಾಗಿ ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು.
ಇದಕ್ಕೆ ಒಪ್ಪದ ಪ್ರತಿಭಟನಾನಿರತರು ನ್ಯಾಯ ಸಿಗುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಉಪ ವಿಭಾಗಾಧಿಕಾರಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳದಿಂದ ತೆರಳಿದರು.
ಸಮೀವುಲ್ಲಾ, ಅಯ್ಯಪ್ಪ, ಅಶೋಕ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.