ಕೇಂದ್ರ ರೇಷ್ಮೆ ಮಂಡಳಿ, ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ರೇಷ್ಮೆ ಇಲಾಖೆಯಿಂದ ನಗರದಲ್ಲಿ ಆಯೋಜಿಸಿದ್ದ ರೇಷ್ಮೆ ಕೃಷಿ ಮೇಳ-2026ರಲ್ಲಿ ವಿವಿಧ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು. ಪಿ.ಎಸ್.ಗಿರೀಶ್, ಡಾ.ಗಿರಿಧರ್ ಪರ್ವತಂ, ಡಾ.ಪಿ.ದೀಪಾ, ವೈ.ಟಿ.ತಿಮ್ಮಯ್ಯ, ಬಿ.ಎಸ್.ನಂಜುಂಡಸ್ವಾಮಿ ಇತರರು ಇದ್ದರು. 
ಮೈಸೂರು

ನೂತನ ತಂತ್ರಜ್ಞಾನ ಬಳಸಿದರೆ ಕೃಷಿಯಲ್ಲಿ ಲಾಭ ಸಾಧ್ಯ: ಪಿ.ಎಸ್.ಗಿರೀಶ್

ಪ್ರಮುಖ ಮುಖ್ಯಾಂಶಗಳು

  • ವಿಜ್ಞಾನ ಬೆಳೆದಂತೆ ಕೃಷಿಯಲ್ಲಿಯೂ ಹೊಸ ಅವಿಷ್ಕಾರಗಳು ಆಗುತ್ತಿವೆ
  • ಯಾವುದೇ ಕ್ಷೇತ್ರ ಬದಲಾದರೂ ಕೃಷಿ ಕ್ಷೇತ್ರವನ್ನು ಯಾವ ಕಾಲಕ್ಕೂ ಕಡೆಗಣಿಸಲು ಸಾಧ್ಯವಿಲ್ಲ
ಮೈಸೂರು:ನೂತನ ಅವಿಷ್ಕಾರ, ತಂತ್ರಜ್ಞಾನವನ್ನು ಬಳಸಿಕೊಂಡು ಕೃಷಿಯಲ್ಲಿ ಲಾಭ ಕಾಣಬೇಕು ಎಂದು ಕೇಂದ್ರ ರೇಷ್ಮೆ ಮಂಡಳಿ ಹಣಕಾಸು ವಿಭಾಗದ ನಿರ್ದೇಶಕ ಪಿ.ಎಸ್.ಗಿರೀಶ್ ರೈತರಿಗೆ ಸಲಹೆ ನೀಡಿದರು.
ಕೇಂದ್ರ ರೇಷ್ಮೆ ಮಂಡಳಿ, ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ರೇಷ್ಮೆ ಇಲಾಖೆಯಿಂದ ನಗರದ ಹೊರವಲಯದಲ್ಲಿ ಸುಸ್ಥಿರ ರೇಷ್ಮೆ ಕೃಷಿಗಾಗಿ ಸುಧಾರಿತ ತಂತ್ರಜ್ಞಾನ ವಿಷಯವಾಗಿ ಆಯೋಜಿಸಿದ್ದ ರೇಷ್ಮೆ ಕೃಷಿ ಮೇಳ-2026ಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿಜ್ಞಾನ ಬೆಳೆದಂತೆ ಕೃಷಿಯಲ್ಲಿಯೂ ಹೊಸ ಅವಿಷ್ಕಾರಗಳು ಆಗುತ್ತಿವೆ. ಅಲ್ಲದೆ ತಂತ್ರಜ್ಞಾನವೂ ಬೆಳವಣಿಗೆ ಹೊಂದುತ್ತಿದ್ದು, ಇವುಗಳ ಬಗ್ಗೆ ರೈತರು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ನೂತನ ಪದ್ಧತಿಯನ್ನು ಪರಿಚಯಿಸಿಕೊಂಡು ಅದನ್ನು ಕೃಷಿಯಲ್ಲಿ ಅಳವಡಿಸಿಕೊಂಡರೆ ಹೆಚ್ಚಿನ ಲಾಭವಿದೆ ಎಂದು ಸಲಹೆ ನೀಡಿದರು.
ಮುಂದಿನ 10ರಿಂದ 20 ವರ್ಷಗಳಲ್ಲಿ ಕೃಷಿಗೆ ಅತ್ಯಂತ ಬೇಡಿಕೆ ಬರಲಿದೆ. ಯಾವುದೇ ಕ್ಷೇತ್ರ ಬದಲಾದರೂ ಕೃಷಿ ಕ್ಷೇತ್ರವನ್ನು ಯಾವ ಕಾಲಕ್ಕೂ ಕಡೆಗಣಿಸಲು ಸಾಧ್ಯವಿಲ್ಲ. ಆದ್ದರಿಂದ ಕೃಷಿಯನ್ನು ಅವಲಂಬಿತರು ಹೆಚ್ಚಾಗಬೇಕು ಎಂದರು.
ಭಾರತದ ರೇಷ್ಮೆಗೆ ಬಹಳಷ್ಟು ಬೇಡಿಕೆ ಇದ್ದು, ಈಗ ಲಭ್ಯ ಇರುವ ಕಚ್ಚಾವಸ್ತು ಸಾಲುತ್ತಿಲ್ಲ. ಹೀಗಾಗಿ ಬೇಡಿಕೆ ಪೂರೈಸಲು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದ್ದರಿಂದ ರೇಷ್ಮೆ ಬೆಳೆಗಾರರು ನಮ್ಮಲ್ಲಿಯೂ ಹೆಚ್ಚಾಗಬೇಕು. ಆಂಧ್ರಪ್ರದೇಶದ ಗ್ರಾಮವೊಂದರಲ್ಲಿ ಒಬ್ಬ ರೈತ ಮಾತ್ರ ರೇಷ್ಮೆ ಬೆಳೆಯುತ್ತಿದ್ದರು. ಅವರು ಗಳಿಸುತ್ತಿದ್ದ ಲಾಭದಿಂದ ಪ್ರೇರೇಪಿತರಾಗಿ ಈಗ ಗ್ರಾಮದ 100ಕ್ಕೂ ಹೆಚ್ಚು ಮಂದಿ ರೇಷ್ಮೆ ಬೆಳೆಯುತ್ತಿದ್ದಾರೆ ಎಂದರು.
ಸರ್ಕಾರ ಕೂಡ ರೇಷ್ಮೆ ಬೆಳೆಗಾರರಿಗೆ ಉಪಕರಣ, ಇನ್ನಿತರ ವೆಚ್ಚಗಳಿಗೆ ಸಬ್ಸಿಡಿ ನೀಡುತ್ತಿದೆ. ಈ ಸಬ್ಸಿಡಿಯನ್ನು ಹೆಚ್ಚಿಸಲು ಯೋಜನೆ ರೂಪಿಸಲಾಗುತ್ತಿದ್ದು, ಮುಂದಿನ 6ರಿಂದ 8 ತಿಂಗಳಲ್ಲಿ ಅದನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾಲಯದ (ಸಿಎಫ್‌ಟಿಆರ್‌ಐ) ನಿರ್ದೇಶಕ ಡಾ.ಗಿರಿಧರ್ ಪರ್ವತಂ ಮಾತನಾಡಿ, ರೇಷ್ಮೆ ಬೆಳೆಯನ್ನು ಕೇವಲ ವಸ್ತುಗಳನ್ನು ತಯಾರಿಸುವ ಜತೆಗೆ ಉಪ ಉತ್ಪನ್ನಗಳನ್ನು ತಯಾರಿಸುವ ಕುರಿತು ಸಂಶೋಧನೆ ನಡೆಸಲಾಗುತ್ತಿದೆ ಎಂದರು.
ಅತ್ಯಂತ ಪೋಷಕಾಂಶಯುಕ್ತ ಹಿಪ್ಪುನೇರಳೆ ಹಣ್ಣನ್ನು ವಿವಿಧ ನಮೂನೆಯಲ್ಲಿ ಬಳಸುವ ಕುರಿತು ಸಿಎಫ್‌ಟಿಆರ್‌ಐ, ಸಿಎಸ್‌ಆರ್‌ಟಿಐ, ಡಿಎಫ್‌ಆರ್‌ಎಲ್‌ನಿಂದ ಸಂಶೋಧನೆ ನಡೆಸಲಾಗುತ್ತಿದೆ. ಈಗಾಗಲೇ ಕೆಲ ಆಹಾರ ಪದಾರ್ಥಗಳು ಹೊರ ತರಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಇನ್ನಷ್ಟು ವಸ್ತುಗಳು ಹೊರಬರಲಿವೆ ಎಂದು ವಿವರಿಸಿದರು.
ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಸಿಎಸ್‌ಆರ್‌ಟಿಐ) ನಿರ್ದೇಶಕಿ ಡಾ.ಪಿ.ದೀಪಾ ಮಾತನಾಡಿ, ನಮ್ಮ ಸಂಸ್ಥೆಯಿಂದ ರೈತರಿಗೆ ನಿರಂತರ ತರಬೇತಿ, ತಜ್ಞರಿಂದ ಮಾಹಿತಿ ನೀಡಲಾಗುತ್ತಿದೆ. ಈ ಸಮಾವೇಶದ ಮೂಲಕ ರೈತರ ನಡುವೆ ವಿಷಯ ತಂತ್ರಜ್ಞಾನ ವಿನಿಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.
ಮೈಸೂರು ಅಕಾಶವಾಣಿ ಕೃಷಿರಂಗ ಕಾರ್ಯಕ್ರಮಾಧಿಕಾರಿ ಕೇಶವಮೂರ್ತಿ ಅವರು, ಸಿಎಸ್‌ಆರ್‌ಟಿಐ ಸಹಕಾರದಲ್ಲಿ ಮೈಸೂರು ಬಾನುಲಿ ಕೇಂದ್ರದಿಂದ ರೇಷ್ಮೆ ಬೆಳೆಯ ಕುರಿತು ಒಂದು ವರ್ಷದವರೆಗೆ ಸರಣಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರಲ್ಲಿ ಪ್ರಗತಿಪರ ರೇಷ್ಮೆ ಬೆಳೆಗಾರರು ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ ಎಂದರು.
ರೇಷ್ಮೆ ಇಲಾಖೆ ಹೆಚ್ಚುವರಿ ನಿರ್ದೇಶಕ ವೈ.ಟಿ.ತಿಮ್ಮಯ್ಯ ಅವರು, ರೈತರಿಗಾಗಿ ಸರ್ಕಾರ ಪ್ರೋತ್ಸಾಹ, ಸಬ್ಸಿಡಿಯನ್ನು ನೀಡುತ್ತಿದ್ದು, ಅದರ ಉಪಯೋಗ ಪಡೆದುಕೊಳ್ಳಬೇಕು. ಸಿಬ್ಬಂದಿ ಕೊರತೆ ನಡುವೆಯೂ ಕರ್ನಾಟಕ ರೇಷ್ಮೆ ಬೆಳೆಯಲ್ಲಿ ಮುಂಚೂಣಿಯಲ್ಲಿದೆ. ಇನ್ನಷ್ಟು ಉತ್ತೇಜನ ನೀಡಲು ಸರ್ಕಾರ ಇನ್ನಷ್ಟು ಸಬ್ಸಿಡಿ, ಇನ್ನಿತರ ಸಹಕಾರ ನೀಡಲು ಮುಂದಾಗಬೇಕಿದೆ ಎಂದು ಹೇಳಿದರು.
ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಬಿ.ಎಸ್.ನಂಜುಂಡಸ್ವಾಮಿ ಮಾತನಾಡಿದರು. ಮೇಳದಲ್ಲಿ ರೇಷ್ಮೆಗೆ ಸಂಬಂಧಿಸಿದ ವಸ್ತುಪ್ರದರ್ಶನ, ತಂತ್ರಜ್ಞಾನ, ಕಿರುಪುಸ್ತಕ ಬಿಡುಗಡೆ, ಸಾಧಕ ರೇಷ್ಮೆ ಬೆಳೆಗಾರರ ಸನ್ಮಾನ, ಸಂಸ್ಥೆಯಿಂದ ಹೊರ ತರಲಾದ ಯೂ ಟೂಬ್ ಬಿಡುಗಡೆ ಮಾಡಲಾಯಿತು.